ಬೆಂಗಳೂರು: ಪ್ರಸ್ತುತ ಖಾಲಿಯಿರುವ ಎರಡನೇ ಉಪ ಲೋಕಾಯುಕ್ತ ಹುದ್ದೆ ಭರ್ತಿ ಮಾಡುವಂತೆ ಸೂಚನೆ ನೀಡಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಎರಡನೇ ಉಪ ಲೋಕಾಯುಕ್ತ ಹುದ್ದೆ ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮಾಜ ಪರಿವರ್ತನಾ ಸಮುದಾಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಆಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾ.ಬಿ.ಎಸ್.ಪಾಟೀಲ್ ಅವರು ಎರಡನೇ ಉಪ ಲೋಕಾಯುಕ್ತರಾಗಿ 2016ರ ನವೆಂಬರ್ 20.ರಂದು ನೇಮಕಗೊಂಡಿದ್ದರು. ನಂತರ ಅವರೇ 2022ರ ಜೂ.14ರಂದು ಲೋಕಾಯುಕ್ತರಾಗಿ ನೇಮಕಗೊಂಡರು. ಅಂದಿನಿಂದ ಎರಡನೇ ಉಪ ಲೋಕಾಯುಕ್ತರ ಹುದ್ದೆ ಖಾಲಿಯಿದ್ದು, ಈವರೆಗೂ ಹುದ್ದೆಯನ್ನು ಭರ್ತಿ ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅಲ್ಲದೆ, ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಪ್ರಕಾರ ಎರಡನೇ ಉಪ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಈ ಹುದ್ದೆ ಖಾಲಿ ಉಳಿದಿರುವುದರಿಂದ ಲೋಕಾಯುಕ್ತದಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, 2022ರ ಡಿಸೆಂಬರ್ ಅಂತ್ಯಕ್ಕೆ ಲೋಕಾಯುಕ್ತದಲ್ಲಿ ಒಟ್ಟು 11,448 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿದ್ದವು. ಅದರಲ್ಲಿ ಎರಡನೇ ಉಪ ಲೋಕಾಯುಕ್ತರ ಮುಂದೆಯೇ ಒಟ್ಟ 4,232 ಪ್ರಕರಣಗಳು ವಿಲೇವಾರಿ ಬಾಕಿಯಿದೆ. ಆದ್ದರಿಂದ ಕೂಡಲೇ ಎರಡನೇ ಉಪ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.