ಬೆಂಗಳೂರು :ಶರಾವತಿ ಕಣಿವೆಯಲ್ಲಿ ಉದ್ದೇಶಿತ ಜಲ ವಿದ್ಯುತ್ ಯೋಜನೆಯ ಸರ್ವೆ ಹಾಗೂ ಭೌಗೋಳಿಕ ತಾಂತ್ರಿಕ ತನಿಖೆಯ ಕಾಮಗಾರಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಬಳ್ಳಾರಿಯ ಎಡ್ವರ್ಡ್ ಸಂತೋಷ್ ಮಾರ್ಟಿನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲೆ ಶ್ರೀಜಾ ಚಕ್ರವರ್ತಿ, ಶರವಾತಿ ಕಣಿವೆಯಲ್ಲಿ ಜಲ ವಿದ್ಯುತ್ ಯೋಜನೆ ಕೈಗೊಳ್ಳಲಿರುವ ಪ್ರದೇಶವು ಸಿಂಗಳೀಕ ಎಂದು ಕರೆಯುವ ಅಪರೂಪದ ಮಂಗಗಳಿರುವ ಸಂರಕ್ಷಿತ ವಲಯವಾಗಿದೆ. ಯೋಜನೆ ಜಾರಿಯಾದಲ್ಲಿ ಸಿಂಗಳೀಕ ತಳಿ ಅಪಾಯ ಎದುರಿಸಲಿದೆ. ಅಲ್ಲದೆ, ಯೋಜನೆ ಮತ್ತು ಅದರ ಸಮೀಕ್ಷೆ ಕಾಮಗಾರಿ ಪರಿಸರಕ್ಕೆ ಮಾರಕವಾಗಿದೆ ಎಂದರು.
ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕರ್ನಾಟಕ ವಿದ್ಯುತ್ ನಿಗಮ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ವನ್ಯಜೀವಿ ಮಂಡಳಿ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ :
ಯೋಜನೆಗೆ ಅನುಮತಿ ನೀಡಿ 2020ರ ಮೇ 6ಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ (ವನ್ಯಜೀವಿ) ಹೊರಡಿಸಿರುವ ಆದೇಶ ಪರಿಸರಕ್ಕೆ ಮಾರಕವಾಗಿದ್ದು ಅದನ್ನು ರದ್ದುಪಡಿಸಬೇಕು. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಯೋಜನೆಗೆ ಸರ್ವೆ ಹಾಗೂ ಭೌಗೋಳಿಕ ತಾಂತ್ರಿಕ ತನಿಖೆ ನಡೆಸುವ ಪ್ರಸ್ತಾವನೆಗೆ ನೀಡಿರುವ ಅನುಮೋದನೆ ರದ್ದುಗೊಳಿಸಬೇಕು. ಹಾಗೆಯೇ, ಈ ಸಂಬಂಧ ರಾಜ್ಯ ವನ್ಯಜೀವಿ ಮಂಡಳಿ 2019ರ ಸೆ.26ರಂದು ಕಳುಹಿಸಿರುವ ಶಿಫಾರಸು ರದ್ದುಗೊಳಿಸಬೇಕು. ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಸಮೀಕ್ಷೆ ಕಾರ್ಯ ಕೈಗೊಳ್ಳದಂತೆ ಕರ್ನಾಟಕ ವಿದ್ಯುತ್ ನಿಗಮಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.