ಕರ್ನಾಟಕ

karnataka

ETV Bharat / state

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಾಗಣ್ಣಗೌಡ ನೇಮಕ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್​​ ನೋಟಿಸ್ - ನಾಗಣ್ಣಗೌಡ ನೇಮಕ ಪ್ರಶ್ನಿಸಿ ಅರ್ಜಿ

ನಾಗಣ್ಣಗೌಡ ಅವರು ಕೆಎಸ್‌ಸಿಪಿಸಿಆರ್ ಅಧ್ಯಕ್ಷೆ ಹುದ್ದೆಗೆ ಅರ್ಜಿ ಸಲ್ಲಿಸಿರಲಿಲ್ಲ. ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ಇರಲಿಲ್ಲ. ಆದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ಕಾರಣ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ - ವಕೀಲ ಎಸ್.ಉಮಾಪತಿ.

High Court
ಹೈಕೋರ್ಟ್

By

Published : Jan 6, 2023, 5:56 PM IST

ಬೆಂಗಳೂರು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ(ಕೆಎಸ್‌ಸಿಪಿಸಿಆರ್) ಅಧ್ಯಕ್ಷರ ಸ್ಥಾನಕ್ಕೆ ಕೆ. ನಾಗಣ್ಣಗೌಡ ಎಂಬುವರನ್ನು ನೇಮಕ ಮಾಡಿರುವ ಆದೇಶ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ವಕೀಲರಾದ ಸುಧಾ ಕಟ್ವಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ, ಪ್ರತಿವಾದಿಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣಗೌಡ ಮತ್ತು ಸದಸ್ಯ ಕಾರ್ಯದರ್ಶಿಯವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ ವಾದ ಮಂಡಿಸಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಸ್ಥಾನ ಭರ್ತಿ ಮಾಡುವುದಕ್ಕಾಗಿ ರಾಜ್ಯ ಸರ್ಕಾರ 2022ರ ಫೆಬ್ರವರಿ 2ರಂದು ಅಧಿಸೂಚನೆ ಹೊರಡಿಸಿತ್ತು. ನಂತರ ಮೇ 9 ರಂದು ಅರ್ಹ 10 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಇದಾದ ಬಳಿಕ 2022ರ ಅಕ್ಟೋಬರ್ 21ರಂದು ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೇಸರೇ ಇಲ್ಲದ ಕೆ.ನಾಗಣ್ಣಗೌಡ ಎಂಬುವರನ್ನು ನೇಮಕ ಮಾಡಿ ಆದೇಶಿಸಿದೆ.

ಕೆಎಸ್‌ಸಿಪಿಸಿಆರ್ ಅಧ್ಯಕ್ಷರನ್ನಾಗಿ ನೇಮಕವಾಗುವವರು ಮಕ್ಕಳ ರಕ್ಷಣಾ ವಿಚಾರದಲ್ಲಿ ಗಣನೀಯ ಸೇವೆ ಮಾಡಿರಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆ 2005ರ ಸೆಕ್ಷನ್ 17ರಲ್ಲಿ ಹೇಳಲಾಗಿದೆ. ಅಲ್ಲದೇ, ನಾಗಣ್ಣಗೌಡ ಅವರು ಕೆಎಸ್‌ಸಿಪಿಸಿಆರ್ ಅಧ್ಯಕ್ಷೆ ಹುದ್ದೆಗೆ ಅರ್ಜಿ ಸಲ್ಲಿಸಿರಲಿಲ್ಲ. ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ಇರಲಿಲ್ಲ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ಕಾರಣ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನೂ ಓದಿ:ನೇವಾ ಮೂಲಕ ಇ-ವಿಧಾನ ಮಂಡಲ ಯೋಜನೆ ಜಾರಿಗೆ ಕೋರಿಕೆ: ಸರ್ಕಾರಕ್ಕೆ ನೋಟಿಸ್​

ಈ ಪ್ರಕ್ರಿಯೆ ನಿಯಮ ಬಾಹಿರವಾಗಿದೆ. ಹೀಗಾಗಿ ಅವರನ್ನು ಕೆಎಸ್‌ಸಿಪಿಸಿಆರ್ ಅಧ್ಯಕ್ಷರ ಹುದ್ದೆಯಿಂದ ವಜಾಗೊಳಿಸಬೇಕು. ಮತ್ತು ಈ ಸಂಬಂಧದ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದು ಮಾಡಬೇಕು ಎಂದು ಅವರು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ABOUT THE AUTHOR

...view details