ಬೆಂಗಳೂರು:ಖಾಸಗಿ ಇಂಜಿನಿಯರ್ ಕಾಲೇಜುಗಳಲ್ಲಿ ಕಾಮೆಡ್ ಕೆ ಪ್ರವೇಶಾತಿಯಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ವರದಿ ಮಾಡಿಕೊಳ್ಳದಿದ್ದರೆ ಪಾವತಿ ಮಾಡಲಾಗಿರುವ ಶುಲ್ಕ ಮೊತ್ತವನ್ನು ಕಳೆದುಕೊಳ್ಳುವುದರ ಜತೆಗೆ, ಐದು ಪಟ್ಟು ದಂಡ ವಿಧಿಸಲಾಗುತ್ತದೆ ಎಂಬ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಕಾಮೆಡ್ ಕೆ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ಮಾಡಿದ ಹಂಗಾಮಿ ಮುಖ್ಯ ನಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪ್ರವೇಶಾತಿ ಮೇಲ್ವಿಚಾರಣಾ ಸಮಿತಿ, ಕರ್ನಾಟಕ ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ, ವಿಶ್ವವಿದ್ಯಾಲಯ ಧನಸಹಯೋಗ ಆಯೋಗ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ಗೆ ನೋಟಿಸ್ ಜಾರಿ ಮಾಡಿದೆ.
ಮುಂದಿನ ಶೈಕ್ಷಣಿಕ ಸಾಲಿನ ಕರ್ನಾಟಕದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿ ಕುರಿತಂತೆ ಕಾಮೆಡ್ ಕೆ ಮಾರ್ಗಸೂಚಿ ರಚನೆ ಮಾಡಿದೆ. ಅದರ ಪ್ರಕಾರ ಕಾಲೇಜಿಗೆ ಪ್ರವೇಶಾತಿ ಪಡೆದ ನಂತರ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ವಿದ್ಯಾರ್ಥಿಯು ಕಾಲೇಜಿಗೆ ವರದಿ ಮಾಡಿಕೊಂಡು ಅಧ್ಯಯನ ಮುಂದುವರಿಸಿದ್ದರೆ ಮತ್ತು ಮೂಲ ದಾಖಲೆಗಳನ್ನು ಒಸಗಿಸದಿದ್ದರೆ, ಪ್ರವೇಶಾತಿ ಪಡೆದ ಶುಲ್ಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೇ, ಶುಲ್ಕ ಮೊತ್ತದ ಐದು ಪಟ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಮಾರ್ಗಸೂಚಿ ಹೇಳುತ್ತದೆ.