ಕರ್ನಾಟಕ

karnataka

ETV Bharat / state

ಸ್ಕೈವಾಕ್ ನಿರ್ಮಿಸಲು ಮರ ತೆರವು ಪ್ರಶ್ನಿಸಿ ಪಿಐಎಲ್: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ - ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ

ಎಲ್ಲಿ ಸ್ಕೈವಾಕ್ ನಿರ್ಮಿಸಬೇಕು, ಹೇಗೆ ನಿರ್ಮಿಸಬೇಕು ಎಂಬುದನ್ನು ಕೋರ್ಟ್ ನಿರ್ಧರಿಸುವುದು ಸರಿಯಲ್ಲ. ಅದನ್ನು ತಜ್ಞರು ನಿರ್ಧರಿಸಬೇಕು. ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿದ್ದರೆ ಆ ಕುರಿತು ಬಿಬಿಎಂಪಿ ಕ್ರಮಕ್ಕೆ ಮುಂದಾಗಲಿ ಎಂದು ಅಭಿಪ್ರಾಯಪಟ್ಟಿತು.

High Court issued notice to BBMP; on  Tree clearance to build Skywalk issue
ಸ್ಕೈವಾಕ್ ನಿರ್ಮಿಸಲು ಮರ ತೆರವು ಪ್ರಶ್ನಿಸಿ ಪಿಐಎಲ್

By

Published : Oct 7, 2020, 7:36 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 154ನೇ ವಾರ್ಡ್​ನ ಎನ್.ಆರ್. ಕಾಲೋನಿಯ ಬಸ್ ನಿಲ್ದಾಣದಲ್ಲಿ ಸ್ಕೈವಾಕ್ ನಿರ್ಮಿಸಲು ಮರಗಳನ್ನು ಕತ್ತರಿಸಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ನಗರದ ವಕೀಲ ಪ್ರಶಾಂತ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರ ವಕೀಲ ಪ್ರಶಾಂತ್ ರಾವ್ ವಾದಿಸಿ, ಎನ್.ಆರ್. ಕಾಲೋನಿಯ ಬಸ್ ನಿಲ್ದಾಣದಲ್ಲಿ ಸ್ಕೈವಾಕ್ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಸ್ಥಳದಲ್ಲಿದ್ದ ಮರಗಳನ್ನು ತೆರವು ಮಾಡಿದ್ದಾರೆ. ಆದರೆ ಈ ಜಾಗದಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿದ್ದರಿಂದ ಫುಟ್​ಪಾತ್​​​​ ತುಂಬಾ ಕಿರಿದಾಗಿದೆ. ಇದೀಗ ಸ್ಕೈವಾಕ್ ನಿರ್ಮಿಸಿದರೆ ಪಾದಚಾರಿಗಳ ಓಡಾಟಕ್ಕೆ ಮತ್ತಷ್ಟು ಸಮಸ್ಯೆಯಾಗಲಿದೆ. ಹೀಗಾಗಿ ಸ್ಕೈವಾಕ್ ನಿರ್ಮಿಸದಂತೆ ತಡೆ ನೀಡಬೇಕು ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಲ್ಲಿ ಸ್ಕೈವಾಕ್ ನಿರ್ಮಿಸಬೇಕು, ಹೇಗೆ ನಿರ್ಮಿಸಬೇಕು ಎಂಬುದನ್ನು ಕೋರ್ಟ್ ನಿರ್ಧರಿಸುವುದು ಸರಿಯಲ್ಲ. ಅದನ್ನು ತಜ್ಞರು ನಿರ್ಧರಿಸಬೇಕು. ಆದರೆ, ನೀವು ಆರೋಪಿಸಿರುವಂತೆ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದರೆ, ಅದನ್ನು ತೆರವು ಮಾಡಲು ಬಿಬಿಎಂಪಿ ಕೂಡಲೇ ಎಲ್ಲ ಕ್ರಮ ಜರುಗಿಸಬೇಕು. ಇದಕ್ಕೆ ಪೊಲೀಸರು ಅಗತ್ಯ ನೆರವು ನೀಡಬೇಕು.

ಸ್ಕೈವಾಕ್ ನಿರ್ಮಾಣಕ್ಕೆ ಪೂರ್ವಾನುಮತಿ ಇಲ್ಲದೆ ಮರ ಕತ್ತರಿಸಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕು ಎಂದು ಪಾಲಿಕೆಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details