ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರವೇಶಕ್ಕೆ ನಡೆಸಿರುವ ಪರೀಕ್ಷೆ ರದ್ದುಪಡಿಸಲು ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ತಡೆಹಿಡಿಯಲು ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಬೆಂಗಳೂರು ವಿವಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎಸ್. ಆದಿ ಮಂಜುನಾಥ್ ಸೇರಿದಂತೆ 17 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರ ಪೀಠ ಈ ಆದೇಶ ಮಾಡಿದೆ.
ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಬೆಂಗಳೂರು ವಿಶ್ವದ್ಯಾಲಯದ ಕುಲಾಧಿಪತಿ, ಕುಲಪತಿ, ಸಹ ಕುಲಾಧಿಪತಿ, ಆಡಳಿತ ಮತ್ತು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್‌ಗಳು ಸೇರಿದಂತೆ 31 ಮಂದಿ ಪ್ರತಿವಾದಿಗಳಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಪಿಎಚ್‌ಡಿ ಪ್ರವೇಶಾತಿ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.