ಬೆಂಗಳೂರು:ಹೊಸಪೇಟೆ-ವಾಸ್ಕೊ ಹಾಗೂ ಲೋಂಡ-ಮಿರ್ಜಾ ರೈಲ್ವೆ ಮಾರ್ಗವಿರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ವನ್ಯ ಜೀವಿಗಳಿಗೆ ತೊಂದರೆಯಾಗುವುದನ್ನು ತಡೆಯಲು ರೈಲುಗಳ ವೇಗ ಕಡಿಮೆ ಮಾಡುವಂತೆ ಸೂಚನೆ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಆಕ್ಷೇಪಣೆ ಸಲ್ಲಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ.
ಈ ಸಂಬಂಧ ಗಿರಿಧರ ಕುಲಕರ್ಣಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. ಅಲ್ಲದೆ, ಬೆಳಗಾವಿ, ಹಳಿಯಾಳ ಮತ್ತು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಪ್ರಕರಣ ಸಂಬಂಧ ಮುಂದಿನ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ.
ವನ್ಯಜೀವಿಗಳನ್ನು ರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದು ಕೇವಲ ಅಸ್ಸಾಂ, ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಕ್ಕೆ ಅನ್ವಯವಾಗಲಿದೆ. ಅಲ್ಲದೆ, ಅರಣ್ಯದ ಮೂಲಕ ಸಂಚರಿಸುವ ರೈಲುಗಳ ವೇಗದ ಮಿತಿ ಕಡಿತಗೊಳಿಸುವಂತೆ ಸುಪ್ರೀಂಕೋರ್ಟ್ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದೆ. ಈ ಆದೇಶವನ್ನು ಅನುಸರಿಸದಿದ್ದಲ್ಲಿ ತಪ್ಪಿತಸ್ಥ ಲೋಕೋ ಪೈಲೆಟ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಅರ್ಜಿದಾರರ ಕೋರಿಕೆ ಏನು ? :2014ರಿಂದ ಈವರೆಗೆ ಲಭ್ಯವಿರುವ ಮಾಹಿತಿಯಂತೆ ಬೆಳಗಾವಿ, ಧಾರವಾಡ, ದಾಂಡೇಲಿ ಹಾಗೂ ಹಳಿಯಾಳದ ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಢಿಕ್ಕಿ ಹೊಡೆದ ಪರಿಣಾಮ 60ಕ್ಕೂ ಅಧಿಕ ಪ್ರಾಣಿಗಳು ಸಾವನ್ನಪ್ಪಿವೆ. ಇದರಲ್ಲಿ 2 ಆನೆ, 49 ಕಾಡುಕೋಣ ಸೇರಿ ಕರಡಿ, ಕಾಡುನಾಯಿ, ಕಾಡುಹಂದಿಗಳು, ಜಿಂಕೆಗಳು ಮೃತಪಟ್ಟಿವೆ. ರೈಲುಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ.