ಬೆಂಗಳೂರು :ಮದ್ಯ ಮಾರಾಟ ಮಳಿಗೆ ಸ್ಥಳಾಂತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಶಿಫಾರಸು ಪತ್ರ ನೀಡಿದ್ದಾರೆಂಬ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಪ್ರಕರಣದಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರು ಹಾಗೂ ಹಿರಿಯೂರು ಶಾಸಕರನ್ನು ಪ್ರತಿವಾದಿಯಾಗಿ ಸೇರಿಸಲು ಸೂಚಿಸಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ಮದ್ಯ ಮಾರಾಟ ಮಳಿಗೆ ಸ್ಥಳಾಂತರಿಸಲು ಅಬಕಾರಿ ಉಪ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಕೋರಿ ಸ್ಥಳೀಯರಾದ ಹನುಮಂತಪ್ಪ ಮತ್ತಿತರ 47 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಪಿ.ಹೆಚ್. ವಿರೂಪಾಕ್ಷಯ್ಯ ವಾದಿಸಿ, ಸ್ಥಳೀಯ ಸಂಸದರು ಹಾಗೂ ಶಾಸಕರ ಶಿಫಾರಸು ಪತ್ರ ಆಧರಿಸಿ ಮದ್ಯ ಮಾರಾಟ ಮಳಿಗೆ ಸ್ಥಳಾಂತರಿಸಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದು ವಿವರಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಜನಪ್ರತಿನಿಧಿಗಳು ಇಂಥ ಶಿಫಾರಸು ಪತ್ರ ನೀಡುವ ಪ್ರವೃತ್ತಿ ಸರಿಯಲ್ಲ ಎಂದು ಟೀಕಿಸಿತಲ್ಲದೇ, ಅರ್ಜಿಯಲ್ಲಿ, ಸಂಸದರು ಹಾಗೂ ಶಾಸಕರನ್ನು ಪ್ರತಿವಾದಿಗಳನ್ನಾಗಿ ಸೇರಿಸಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು. ಇದೇ ವೇಳೆ, ರಾಜ್ಯ ಸರ್ಕಾರ, ಅಬಕಾರಿ ಇಲಾಖೆ, ಎಂಎಸ್‌ಐಎಲ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.
ಪ್ರಕರಣದ ಹಿನ್ನೆಲೆ :
ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿರುವ ಮದ್ಯ ಮಾರಾಟ ಮಳಿಗೆಯನ್ನು ಸ್ಥಳಾಂತರಿಸುವಂತೆ ಸಂಸದ ಎ. ನಾರಾಯಣಸ್ವಾಮಿ ಹಾಗೂ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ 2019ರ ಮೇ ತಿಂಗಳಲ್ಲಿ ಶಿಫಾರಸು ಪತ್ರ ಬರೆದಿದ್ದರು. ಇವುಗಳನ್ನು ಆಧರಿಸಿ ಚಿತ್ರದುರ್ಗ ಜಿಲ್ಲಾ ಅಬಕಾರಿ ಉಪ ಆಯುಕ್ತ 2020ರ ಜುಲೈ 7ರಂದು ಸ್ಥಳಾಂತರ ಆದೇಶ ಹೊರಡಿಸಿದ್ದರು. ಮದ್ಯದ ಮಳಿಗೆ ಇರುವ ಸ್ಥಳದ ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿದೆ ಮತ್ತು ಜನವಸತಿ ಪ್ರದೇಶವಿದೆ. ಜನ ಕುಡಿದು ಗಲಾಟೆ ಮಾಡುವುದರಿಂದ ಶಾಂತಿ ಹಾಳಾಗುತ್ತದೆ. ಹೀಗಾಗಿ, ಮದ್ಯದಂಗಡಿಯನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸುವಂತೆ ಶಾಸಕರು ಹಾಗೂ ಸಂಸದರು ತಮ್ಮ ಪತ್ರದಲ್ಲಿ ತಿಳಿಸಿದ್ದರು.