ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಹೈಕೋರ್ಟ್ ಚಾಲಕನ ಪ್ರಯೋಗಾಲಯದ ವರದಿ ವಿಳಂಬವಾದ ಕುರಿತು ಸರ್ಕಾರ ಸಲ್ಲಿಸಿರುವ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಹೊಸದಾಗಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ವರದಿ ವಿಳಂಬಕ್ಕೆ ಕಾರಣವಾದ ಪ್ರಯೋಗಾಲಯದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪರೀಕ್ಷಾ ವರದಿ ಕೇವಲ ಎರಡು ಗಂಟೆ ವಿಳಂಬವಾಗಿದೆ ಎಂದು ಹೇಳಲಾಗಿದೆ. ಇವೆಲ್ಲಾ ಕಣ್ಣೊರೆಸುವ ತಂತ್ರ, ಇದನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರದ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ಸರ್ಕಾರದ ವರದಿ ತಿರಸ್ಕರಿಸಿರುವ ಪೀಠ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ವರದಿ ವಿಳಂಬಕ್ಕೆ ಕಾರಣವಾದ ಪ್ರಯೋಗಾಲಯದ ವಿರುದ್ಧ ಕ್ರಮ ಕೈಗೊಂಡು ಹೊಸದಾಗಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.