ಬೆಂಗಳೂರು:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದ ತಮಿಳುನಾಡಿನ ರಾಜಕಾರಣಿ ವಿ.ಕೆ ಶಶಿಕಲಾರಿಂದ ಲಂಚ ಪಡೆದು ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪ ಪ್ರಕರಣದಲ್ಲಿ ಬೆಳಗಾವಿ ಕಾರಾಗೃಹ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿರುವ ಸರ್ಕಾರದ ಆದೇಶ ರದ್ದುಪಡಿಸುವಂತೆ ಕೋರಿ ಕೃಷ್ಣಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೆಚ್. ಟಿ ನರೇಂದ್ರ ಪ್ರಸಾದ್ ಅವರಿದ್ದ ಪೀಠ ತಡೆಯಾಜ್ಞೆ ನೀಡಿ ಆದೇಶಿಸಿದೆ. ಇದೇ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಬಂಧೀಖಾನೆ ಅಧೀನ ಕಾರ್ಯದರ್ಶಿ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹೆಚ್ಚುವರಿ ಮಹಾನಿರ್ದೇಶಕ ಮತ್ತು ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲ ಎ. ಎಸ್ ಪೊನ್ನಣ್ಣ ವಾದಿಸಿ, ಶಶಿಕಲಾಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು 2 ಕೋಟಿ ಲಂಚ ಪಡೆದ ಆರೋಪ ಅಂದಿನ ಕಾರಾಗೃಹ ಡಿಜಿಪಿ ಹೆಚ್. ಎನ್ ಸತ್ಯನಾರಾಯಣರಾವ್ ಅವರ ವಿರುದ್ಧ ಇದೆ. ಈ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಎಸ್. ವಿನಯ್ ಕುಮಾರ್ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರವೂ 2018 ರಲ್ಲಿ ಒಪ್ಪಿಕೊಂಡಿದೆ.
ಆ ವರದಿಯಲ್ಲಿ ಅರ್ಜಿದಾರರ ವಿರುದ್ಧದ ಯಾವುದೇ ಆರೋಪವಿಲ್ಲ. ವಿನಯ್ ಕುಮಾರ್ ವರದಿ ಪರಿಗಣಿಸಿ ತನಿಖೆ ನಡೆಸುವಂತೆ ಸರ್ಕಾರ ಎಸಿಬಿಗೆ ನಿರ್ದೇಶಿಸಿತ್ತು. ಎಸಿಬಿ ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದೆ. ಅದರಂತೆ, ಸರ್ಕಾರ ಇದೀಗ ಅಧಿಕಾರಿ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಪೂರ್ವಾನುಮತಿ ನೀಡಿದೆ. ಯಾವುದೇ ನಿರ್ದಿಷ್ಟ ಆರೋಪವಿಲ್ಲದ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮ ಕಾನೂನು ಬಾಹಿರ ಎಂದರು. ವಾದ ಆಲಿಸಿದ ಪೀಠ ಮುಂದಿನ ವಿಚಾರಣೆವರೆಗೂ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಓದಿ:ಕೋರ್ಟ್ನಿಂದ ಕರ್ನಾಟಕ ಕಾಲೇಜಿನ ಪ್ರಾಚಾರ್ಯರ ಬಂಧನ ವಾರಂಟ್