ಬೆಂಗಳೂರು:ಪರಿಸರ ಸ್ನೇಹಿ ಕೈ ಚೀಲ ತಯಾರಿಸುವ ಯಂತ್ರ ನೀಡುವುದಾಗಿ ಭರವಸೆ ನೀಡಿ ಹಣ ಮೋಸ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ದಾಖಲಾದ ಎಫ್ಐ ಆರ್ ರದ್ದುಗೊಳಿಸಬೇಕೆಂದು ಆಶ್ವಥ್ ಹೆಗ್ಡೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿ ಪ್ರಕರಣ ತನಿಖೆ ನಡೆಸದಿರಲು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಎನ್ವಿ ಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಡೆಟ್ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ಹೆಗ್ಡೆ ವಿರುದ್ಧ ಮಹಿಳಾ ಉದ್ಯಮಿ ನೀಲಿಮಾ ಎಂಬುವರು ನೀಡಿದ ದೂರು ಆಧರಿಸಿ ವಂಚನೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಥ್ ಹೆಗ್ಡೆ ಅವರು, ''ನನ್ನ ಮೇಲೆ ಬಂದಿರುವ ಆರೋಪ ಶುದ್ದ ಸುಳ್ಳು. ಯಾವುದೇ ಅವ್ಯವಹಾರ ಎಸಗಿಲ್ಲ. ಸುಖಾಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಠಾಣೆಯಲ್ಲಿ ದೂರು ದಾಖಲಿಸಿ ತೇಜೋವಧೆ ಮಾಡುವ ಪ್ರಯತ್ನ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು'' ಎಂದು ಸ್ಪಷ್ಟನೆ ನೀಡಿದ್ದಾರೆ.
ನೀಲಿಮಾ ದಂಪತಿ ನನ್ನ ಕುಟುಂಬದ ಮೇಲೆ ಜೀವ ಬೆದರಿಕೆ ಹಾಗೂ ಸಮಾಜದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ ಎಂದು ಅಶ್ವಥ್ ಹೆಗ್ದೆ ಆರೋಪಿಸಿದ್ದಾರೆ.
''ಕಳೆದ 2018ರಲ್ಲಿ ನೀಲಿಮಾ ಮತ್ತು ಪತಿ ಬಾಲಾಜಿ ಎಂಬುವರು ಎಂ.ಜಿ. ರಸ್ತೆಯಲ್ಲಿರುವ ನನ್ನ ಎನ್ವಿ ಗ್ರೀನ್ ಬಯೋಟೆಕ್ ಇಂಡಿಯಾ ಕಂಪೆನಿಗೆ ಆಗಮಿಸಿ ನನ್ನ ಕಂಪನಿಯ ಉತ್ಪಾದನಾ ಘಟಕ ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕೆ 1.7 ಕೋಟಿ ರೂ. ವೆಚ್ಚವಾಗಲಿದ್ದು, ಮುಂಗಡವಾಗಿ 30 ಲಕ್ಷ ರೂ. ನೀಡಿದ್ದರು. ಉಳಿದ ಹಣವನ್ನು ಹೊಂದಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಬಾಲಾಜಿ ಅವರು ಕಚೇರಿಗೆ ಆಗಮಿಸಿ ನನ್ನ ಮೇಲೆ ಹಲವು ಬ್ಯಾಂಕ್ಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ನನಗೆ ಮತ್ತು ನನ್ನ ಹೆಂಡತಿಗೆ ಬ್ಯಾಂಕ್ ಲೋನ್ ಸಿಗುವುದಿಲ್ಲ.
ಹಾಗಾಗಿ ಬಾಕಿ ಬಂಡವಾಳವನ್ನು ತಾವೇ ಕಂಪನಿಯ ವತಿಯಿಂದ ತುಂಬಿಸಿ ಕೊಡಿ ಎಂದಿದ್ದರು. ಇದಕ್ಕೆ ನಾನು ನಿರಾಕರಿಸಿದ್ದೆ. ಇದಕ್ಕೆ ಬಾಲಾಜಿ ಅವರು ತನ್ನ ಹೆಂಡತಿಯ ಅಕೌಂಟಿನಿಂದ ನಾನೇ ಆ ಹಣವನ್ನು ಹಾಕಿರುತ್ತೇನೆ, ನನ್ನ ಹೆಂಡತಿಗೆ ಈ ಹಣವನ್ನು ನೀಡಿದರೆ ಅವಳು ಅನಗತ್ಯ ಖರ್ಚು ಮಾಡುತ್ತಾಳೆ. ಹಾಗಾಗಿ ತಾವು ನನಗೆ ಮರಳಿಸಬೇಕು ಎಂದಾಗ ವ್ಯಕ್ತಿಯ ಮಾತಿನಂತೆ ನಾನು ಹಣವನ್ನು ಹಂತ ಹಂತವಾಗಿ ಬಡ್ಡಿ ಸಮೇತ 84 ಲಕ್ಷ ರೂ. ಬಾಲಾಜಿ ಹಾಗೂ ನೀಲಿಮಾ ಬ್ಯಾಂಕ್ ಖಾತೆಗಳಿಗೆ ಮರುಪಾವತಿ ಮಾಡಿದ್ದೇನೆ'' ಎಂದು ಸ್ಪಷ್ಟಪಡಿಸಿದ್ದಾರೆ.
''ಬಾಲಾಜಿ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಟ್ಟಾಗ ಹಣ ನೀಡಲು ನಿರಾಕರಿಸಿದ್ದೆ. ಆಧಾರ ರಹಿತ ಸುಳ್ಳು ಲೆಕ್ಕವನ್ನು ತೋರಿಸಿ ಇನ್ನೂ ಹೆಚ್ಚಿನ ಒಂದು ಕೋಟಿ ಹಣ ಕೊಡದಿದ್ದರೆ, ಮಾನ ಹರಾಜು ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಇದ್ಹಾವುದಕ್ಕೂ ನಾನು ಗಣನೆಗೆ ತೆಗೆದುಕೊಳ್ಳದ ಕಾರಣ ನನ್ನ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾರೆ'' ಎಂದು ತಿಳಿಸಿದ್ದಾರೆ.
''ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಕೊಟ್ಟಿರುವ ಸುಳ್ಳು ದೂರಿನ ಆಧಾರದಲ್ಲಿ ವರದಿ ಬರುವಂತೆ ಸಮಾಜದಲ್ಲಿ ತನ್ನ ಹೆಸರು ಕೆಡಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಸಂಬಂಧ ಕಾನೂನು ಮೂಲಕ ಹೋರಾಟ ನಡೆಸುತ್ತೇನೆ ಎಂದು ಅಶ್ವಥ್ ಹೆಗ್ಡೆ ಹೇಳಿದ್ದಾರೆ.
ಇದನ್ನೂ ಓದಿ:ಬರ ಪರಿಹಾರ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಅನುಭವದ ಕೊರತೆ: ನಳಿನ್ ಕುಮಾರ್ ಕಟೀಲ್