ಕರ್ನಾಟಕ

karnataka

ETV Bharat / state

ಘನತ್ಯಾಜ್ಯ ಟೆಂಡರ್ : ಹೈಕೋರ್ಟ್ ಮಧ್ಯಂತರ ಆದೇಶ - BBMP waste tender

ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವ ಸಂಬಂಧ ಪಾಲಿಕೆ 2019ರಲ್ಲಿ ಕರೆದಿದ್ದ ಟೆಂಡರ್ ರದ್ದುಪಡಿಸುವಂತೆ ಕೋರಿ ಬಿಬಿಎಂಪಿ ಪೌರ ಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

Highcourt
Highcourt

By

Published : Oct 19, 2020, 10:21 PM IST

ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ಮನೆಯಿಂದ ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವ ಸಂಬಂಧ ಗುತ್ತಿಗೆದಾರರಿಗೆ ಪಾಲಿಕೆ ನೀಡುವ ಕಾರ್ಯಾದೇಶಗಳು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಡಟ್ಟಿರಲಿವೆ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ನಗರದ ಪ್ರತಿ ಮನೆಯಿಂದ ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವ ಸಂಬಂಧ ಪಾಲಿಕೆ 2019ರಲ್ಲಿ ಕರೆದಿದ್ದ ಟೆಂಡರ್ ರದ್ದುಪಡಿಸುವಂತೆ ಕೋರಿ ಬಿಬಿಎಂಪಿ ಪೌರ ಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅರ್ಜಿದಾರರ ಪರ ವಕೀಲರು, ಈಗಾಗಲೇ ಹಳೆಯ ಟೆಂಡರ್ ಅನುಸಾರವೇ ಗುತ್ತಿಗೆದಾರರಿಗೆ ಪಾಲಿಕೆಯು ಕಾರ್ಯಾದೇಶಗಳನ್ನು ನೀಡುತ್ತಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಪರ ವಕೀಲರ ಹೇಳಿಕೆ ಪರಿಗಣಿಸಿದ ಪೀಠ, ಅರ್ಜಿಗೆ ಬಿಬಿಎಂಪಿಯು ಮುಂದಿನ ವಿಚಾರಣೆ ವೇಳೆ ಆಕ್ಷೇಪಣೆ ಸಲ್ಲಿಸಲಿ. ಆದರೆ, ಹಳೆ ಟೆಂಡರ್ ಅನುಸಾರ ಗುತ್ತಿಗೆದಾರರಿಗೆ ಪಾಲಿಕೆ ನೀಡುವ ಕಾರ್ಯಾದೇಶಗಳು ನ್ಯಾಯಾಲಯ ಮುಂದೆ ನೀಡುವ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ಮಾಡಿ ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ :

2019ರಲ್ಲಿ ಕರೆಯಲಾದ ಟೆಂಡರ್ ನ್ನು ಮರು ಪರಿಶೀಲಿಸುವ ಬಗ್ಗೆ ಪಾಲಿಕೆಯ ಕೌನ್ಸಿಲ್ ಸಭೆ ನಿರ್ಣಯ ಕೈಗೊಂಡಿದೆ. ಈ ಮಧ್ಯೆ ಹಳೇ ಟೆಂಡರ್ ಪ್ರಕಾರ ಕೆಲವರಿಗೆ ಕಾರ್ಯಾದೇಶಗಳನ್ನು ನೀಡಲಾಗಿದೆ. ಜೊತೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ 2019ರ ಜನವರಿ 18ರಂದು ಕರೆದಿರುವ ಟೆಂಡರ್ ರದ್ದುಗೊಳಿಸಿ, ಹೊಸ ಟೆಂಡರ್ ಕರೆಯಲು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details