ಕರ್ನಾಟಕ

karnataka

ETV Bharat / state

ಭಾರತೀಯ ಎಂದು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ : ಎನ್‌ಆರ್‌ಐ ಶುಲ್ಕ ಪಾವತಿಸಿ ಅಮೆರಿಕಕ್ಕೆ ಹಿಂದಿರುಗಲು ಹೈಕೋರ್ಟ್ ಸೂಚನೆ - ಭಾರತದ ಸಾಗರೋತ್ತರ ನಾಗರಿಕ

ಸುಳ್ಳು ಮಾಹಿತಿ ನೀಡಿ ಸರ್ಕಾರಿ ಕೋಟಾದಲ್ಲಿ ಪದವಿ ಪೂರ್ಣಗೊಳಿಸಿದ ವ್ಯಕ್ತಿಗೆ ಎನ್‌ಆರ್‌ಐ ಶುಲ್ಕ ಪಾವತಿಸಿ ತನ್ನ ದೇಶಕ್ಕೆ ಹಿಂದಿರುಗುವಂತೆ ಹೈಕೋರ್ಟ್ ಸೂಚನೆ ನೀಡಿದೆ.

high court
ಹೈಕೋರ್ಟ್

By

Published : Mar 20, 2023, 3:02 PM IST

ಬೆಂಗಳೂರು: ಭಾರತದವರು ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಮತ್ತೆ ಅಮೆರಿಕಗೆ ಹಿಂದಿರುಗಲು ಮುಂದಾಗಿದ್ದ ವೈದ್ಯರೊಬ್ಬರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅವರು ಅನಿವಾಸಿ ಭಾರತೀಯ(ಎನ್‌ಆರ್‌ಐ) ಅಥವಾ ಭಾರತದ ಸಾಗರೋತ್ತರ ನಾಗರಿಕ (ಓಸಿಐ) ಕೋಟಾದಡಿ ಭರಿಸುವ ಶುಲ್ಕ ಪಡೆದು ತಮ್ಮ ದೇಶಕ್ಕೆ ಹಿಂದಿರುಗಲು ಅಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಸುಮಾರು 29 ವರ್ಷದ ವೈದ್ಯಕೀಯ ಪದವಿಧರೆ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಸೂಚನೆ ನೀಡಿ ಆದೇಶಿಸಿದೆ. ಅರ್ಜಿದಾರರು ಭಾರತದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ವೃತ್ತಿ ಜೀವನವನ್ನು ತಮ್ಮ ದೇಶದಲ್ಲಿ ಮುಂದುವರೆಸಲು ಮುಂದಾಗಿದ್ದಾರೆ. ಭಾರತೀಯರು ಎಂದು ಸುಳ್ಳು ಹೇಳಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ನಿಯಮ ಬಾಹಿರವಾಗಿ ತಮ್ಮ ಗುರಿಯನ್ನು ಸಾಧನೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಬೆಳವಣಿಗೆ ಅತ್ಯಂತ ಖಂಡನೀಯ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ ಏನು ? : ಅರ್ಜಿದಾರರು 1997 ರ ಫೆಬ್ರವರಿ 5 ರಂದು ಅಮೆರಿಕದಲ್ಲಿ ಭಾರತೀಯ ದಂಪತಿಗೆ ಜನಿಸಿದ್ದರು. ಪೋಷಕರು ಭಾರತೀಯ ರಾಯಭಾರ ಕಚೇರಿಯಲ್ಲಿ ಅಮೆರಿಕದ ನಾಗರಿಕ ಎಂಬುದಾಗಿ ನೋಂದಣಿ ಮಾಡಿಸಿದ್ದರು. ಬಳಿಕ ಅಮೆರಿಕ ಅವರಿಗೆ ಪಾಸ್‌ಪೋರ್ಟ್‌ನ್ನು ವಿತರಣೆ ಮಾಡಿತ್ತು. ಈ ಪಾಸ್​ಪೋರ್ಟ್ ಪಡೆದು ಅವರು 2003ರಲ್ಲಿ ಭಾರತಕ್ಕೆ ಬಂದಿದ್ದರು. ಈ ವೀಸಾ ಅವಧಿ 2004ರ ಸೆಪ್ಟಂಬರ್​ ಅವರೆಗೆ ಮಾತ್ರ ಇತ್ತು.

ಇದನ್ನೂ ಓದಿ:ನ್ಯಾಯಾಲಯದ ಅನುಮತಿ ಇಲ್ಲದೆ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಡಿ: ಹೈಕೋರ್ಟ್

ಬಳಿಕ, ರಾಜ್ಯದಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಮುಗಿಸಿದ್ದರು. ಇದಾದ ಬಳಿಕ ಭಾರತೀಯ ನಿವಾಸಿ ಎಂದು ಅರ್ಜಿ ಉಲ್ಲೇಖಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿದ್ದರು. ಇದರಿಂದ ಸರ್ಕಾರಿ ಕೋಟಾದಲ್ಲಿ ಮಂಡ್ಯದ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು.

ವೈದ್ಯಕೀಯ ಪದವಿ ಪೂರ್ಣಗೊಂಡ ಬಳಿಕ ಹೊಸದಾಗಿ ಪಾಸ್‌ಪೋರ್ಟ್ ನೀಡುವಂತೆ ಅಮೆರಿಕ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಅಮೆರಿಕ ಒಂದು ವರ್ಷದ ಅವಧಿಗೆ ಪಾಸ್‌ಪೋರ್ಟ್‌ನ್ನು ನೀಡಿತ್ತು. ಬಳಿಕ, ಭಾರತದಿಂದ ಹೊರಹೋಗಲು ಅನುಮತಿ ನೀಡುವಂತೆ ವಲಸೆ ವಿಭಾಗದ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಲಸೆ ಕಚೇರಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಮ್ಮ ಕಕ್ಷಿದಾರರು ಅಮೆರಿಕದಿಂದ ಭಾರತಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಅಪ್ರಾಪ್ತರಾಗಿದ್ದರು. ಅವರ ತಾಯಿ ಒಬ್ಬಂಟಿಯಾಗಿದ್ದರು. ಹೀಗಾಗಿ, ಅರ್ಜಿದಾರರಿಗೆ ನಾಗರಿಕ ಕಾಯ್ದೆಗಳು ಮತ್ತು ಪಾಸ್‌ಪೋರ್ಟ್ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ವಿದ್ಯಾಭ್ಯಾಸ ಮುಗಿಸಿ ತಮ್ಮ ದೇಶಕ್ಕೆ ಹಿಂದಿರುಗುತ್ತಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಹಾಯಕ ಸಾಲಿಸೇಟರ್ ಜನರಲ್ ಎಚ್. ಶಾಂತಿ ಭೂಷಣ್, ಅರ್ಜಿದಾರರು ಭಾರತಕ್ಕೆ ಬರುವುದಕ್ಕೆ ಪಡೆದಿದ್ದ ಪ್ರವಾಸಿ ವೀಸಾ ಅವಧಿ 2004ರಲ್ಲೇ ಮುಕ್ತಾಯವಾಗಿದ್ದರೂ, 2023ರ ವರೆಗೂ ಅರ್ಜಿದಾರರು ಅಕ್ರಮವಾಗಿ ನೆಲೆಸಿದ್ದಾರೆ. ಇದು ವಿದೇಶಿಯರ ಕಾಯ್ದೆಗೆ ವಿರುದ್ಧವಾಗಿದೆ. ಅಲ್ಲದೇ, ಅರ್ಜಿದಾರರು ಭಾರತೀಯರು ಎಂದು ಹೇಳಿಕೊಂಡಿದ್ದು, ಹೀಗಾಗಿ ಅಮೆರಿಕ ದೇಶ ಪಾಸ್‌ಪೋರ್ಟ್ ನೀಡಿದೆ. ಸುಳ್ಳು ಮಾಹಿತಿ ನೀಡಿ ಅರ್ಜಿದಾರರು ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠ ಅಮೆರಿಕಕ್ಕೆ ತೆರಳುವಂತೆ ಸೂಚಿಸಿದೆ.

ABOUT THE AUTHOR

...view details