ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮ-2016 ಜಾರಿಗೆ ತರುವ ಬಗ್ಗೆ ಅಗಸ್ಟ್ 11ರ ಒಳಗೆ ಪ್ರಮಾಣಪತ್ರ ಸಲ್ಲಿಸಲು ನಗರಾಭಿವದ್ಧಿ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಘನ ತ್ಯಾಜ್ಯ ನಿರ್ವಹಣೆಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡನೆ ಮಾಡಿ, ಘನ ತ್ಯಾಜ್ಯ ನಿರ್ವಹಣೆಯನ್ನು ನಗರದಲ್ಲಿ ಮಾಡಬೇಕು. ನಗರದಲ್ಲಿ ಪ್ರತಿ ದಿನ 5,700 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆದರೆ ಬಿಬಿಎಂಪಿ ಪ್ರತಿ ದಿನ ಬರೀ 1,250 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂದು ಸುಳ್ಳು ಹೇಳುತ್ತಿದೆ ಎಂದರು.
ಈ ವೇಳೆ ನ್ಯಾಯಾಲಯ, ನಗರದಲ್ಲಿ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಘನ ತ್ಯಾಜ್ಯದಿಂದ ಪರಿಸರ ಮಾಲಿನ್ಯಕ್ಕೆ ತೊಂದರೆಯಾಗಲಿದೆ. ಘನ ತ್ಯಾಜ್ಯ ನಿರ್ವಹಣೆ ನಿಯಮ ಜಾರಿ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಖುದ್ದು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ಮುಂದಿನ ವಿಚಾರಣೆ ವೇಳೆ ಹಾಜರಾಗಿ ಪ್ರಮಾಣಪತ್ರ ಸಲ್ಲಿಸಬೇಕೆಂದು ಸೂಚಿಸಿ, ನ್ಯಾಯಾಲಯ ವಿಚಾರಣೆ ಮುಂದೂಡಿದೆ.