ಬೆಂಗಳೂರು:ರಾಜ್ಯದಲ್ಲಿ ದೃಷ್ಟಿಹೀನರೂ ಸೇರಿದಂತೆ ವಿಕಲಚೇತನರ ಸುಗಮ ಸಂಚಾರಕ್ಕೆ ಕೈಗೊಳ್ಳಬಹುದಾದ ದೇಶಕ್ಕೆ ಮಾದರಿಯಾಗುವಂತಹ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ಯೋಜನೆ ಜಾರಿಗಾಗಿ ಸಲಹೆಗಳೊಂದಿಗೆ ಮಾಹಿತಿ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ವಿಕಲಚೇತನರಿಗೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರಿನ ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ ಮತ್ತು ವಿಕಲಚೇತನ ಆಗಿರುವ ಎನ್. ಶ್ರೇಯಸ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಅರ್ಜಿ 2022ರ ಮೇ ತಿಂಗಳಲ್ಲಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಆಗಸ್ಟ್ 3 ರಂದು ನೋಟಿಸ್ ನೀಡಲಾಗಿದೆ. ಆದರೆ, ಅರ್ಜಿದಾರರ ಮನವಿ ಗಂಭೀರವಾಗಿದ್ದರೂ ಈವರೆಗೂ ಸರ್ಕಾರ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
ಜೊತೆಗೆ, ಅರ್ಜಿದಾರರು ಎತ್ತಿರುವ ವಿಚಾರ ಅತ್ಯಂತ ಗಂಭೀರವಾದುದ್ದಾಗಿದೆ. ಸುಪ್ರೀಂ ಕೋರ್ಟ್ ಹಾಗೂ ಹಲವು ಹೈಕೋರ್ಟ್‌ಗಳು ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡುತ್ತಿವೆ. ಆದ್ದರಿಂದ ಈ ಕುರಿತಂತೆ ನಿಲಕ್ಷ್ಯಕ್ಕೆ ಮುಂದಾಗದೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.