ಬೆಂಗಳೂರು: ರಾಜ್ಯದಲ್ಲಿನ ಶಬ್ದ ಮಾಲಿನ್ಯ ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಇರುವುದೇ 234 ಉಪಕರಣಗಳು ಎಂಬ ಹೇಳಿಕೆಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಮಾಲಿನ್ಯ ಅಳೆಯಲು ಅಗತ್ಯ ಪ್ರಮಾಣದಲ್ಲಿ ಉಪಕರಣಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ವಿವಿಧ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ರಾಜ್ಯದಲ್ಲಿನ ಶಬ್ದ ಮಾಲಿನ್ಯ ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಕೇವಲ 234 ನಾಯ್ಸ್ ಮೀಟರ್ಗಳಿವೆ ಎನ್ನಲಾಗಿದೆ. ಇಷ್ಟು ಕಡಿಮೆ ಸಂಖ್ಯೆ ಉಪಕರಣಗಳು ರಾಜ್ಯದಲ್ಲಿನ ಶಬ್ದ ಮಾಲಿನ್ಯ ಅಳೆಯಲು ಸಾಕಾಗುವುದಿಲ್ಲ. ಶಬ್ದ ಮಾಲಿನ್ಯ ತಡೆ ಕಾಯ್ದೆ ಜಾರಿಯಾದ 20 ವರ್ಷಗಳ ನಂತರವೂ ಸೂಕ್ತ ಪ್ರಮಾಣದಲ್ಲಿ ಉಪಕರಣಗಳನ್ನು ಹೊಂದಿಲ್ಲದಿರುವುದು ಸರಿಯಲ್ಲ. ಹೀಗಾಗಿ ರಾಜ್ಯ ಸರ್ಕಾರ ಶಬ್ದ ಮಾಲಿನ್ಯ ಅಳೆಯಲು ಕೂಡಲೇ ಅಗತ್ಯ ಪ್ರಮಾಣದಲ್ಲಿ ನಾಯ್ಸ್ ಮೀಟರ್ಗಳನ್ನು ಖರೀದಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.