ಬೆಂಗಳೂರು: ವಿವಾದಿತ ನಿವೇಶನದಲ್ಲಿ ಗಿರಿನಗರ ಪೊಲೀಸ್ ಠಾಣೆ ನಿರ್ಮಾಣ ಮಾಡದಂತೆ ಹಾಗೂ ಆ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮಂಗಳವಾರ ಸೂಚಿಸಿದೆ.
ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘವು ಉಚಿತವಾಗಿ ನೀಡಿರುವ ನಿವೇಶನದಲ್ಲಿ ಪೊಲೀಸ್ ಠಾಣೆ ನಿರ್ಮಿಸಲು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸುವಂತೆ ಕೋರಿ ಹನುಮಂತನಗರ ನಿವಾಸಿ ಜಿ.ಆರ್.ಅನಿಲ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿ ಸಂಬಂಧ ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ವಿವಾದಿತ ಜಾಗವು ನಗರ ಪೊಲೀಸ್ ಆಯುಕ್ತರ ವಶದಲ್ಲಿಯೇ ಇದ್ದು, ಅದರ ಸುತ್ತ ತಂತಿಬೇಲಿ ಅಳವಡಿಸಲಾಗಿದೆ. ಆದ್ದರಿಂದ ನ್ಯಾಯಾಲಯದ ಮುಂದಿನ ಆದೇಶದವರೆಗೆ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಅದೇ ರೀತಿ ನಿವೇಶವನ್ನು ಯಥಾಸ್ಥಿತಿ ಸಂರಕ್ಷಣೆ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.