ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಅಕ್ರಮವಾಗಿ 9736 ಎ ಖಾತೆ ನೀಡಿದ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀಡಲಾಗಿದ್ದ ಎ ಖಾತಾ ಪ್ರಮಾಣ ಪತ್ರ ರದ್ದು ಮಾಡಿರುವ ಸಂಬಂಧ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.

high-court-instructs-bbmp-to-provide-information-about-illegal-a-account
ಬೆಂಗಳೂರಲ್ಲಿ ಅಕ್ರಮವಾಗಿ 9736 ಎ ಖಾತೆ ನೀಡಿದ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

By ETV Bharat Karnataka Team

Published : Aug 26, 2023, 9:07 AM IST

ಬೆಂಗಳೂರು: ಬೆಂಗಳೂರು ಮಹಾನಗರದ 8 ವಲಯಗಳ ವ್ಯಾಪ್ತಿಯಲ್ಲಿ ಬಿ ಖಾತೆಯ 9,736 ಸ್ವತ್ತುಗಳಿಗೆ ಅಕ್ರಮವಾಗಿ ನೀಡಲಾಗಿದ್ದ ಎ ಖಾತಾ ಪ್ರಮಾಣ ಪತ್ರ ರದ್ದುಪಡಿಸಿರುವುದಕ್ಕೆ ಸಂಬಂಧಿಸಿದಂತೆ ಎಲ್ಲ ಸ್ವತ್ತುಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆಯೇ ಎಂಬುದರ ಕುರಿತಂತೆ ಮುಂದಿನ ದಿನದಲ್ಲಿ ಮಾಹಿತಿ ನೀಡುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.

ಯಲಹಂಕ ವಲಯದ ವರದರಾಜ ಸ್ವಾಮಿ ಬಡಾವಣೆ ನಿವಾಸಿ ಎಸ್.ಎಂ. ರಮೇಶ್ ಎಂಬುವರ ಬಿ ಖಾತೆ ನಿವೇಶನವನ್ನು ಅಕ್ರಮವಾಗಿ ಎ ಖಾತೆಗೆ ಬದಲಾವಣೆ ಮಾಡಿದ್ದ ಬಿಬಿಎಂಪಿ ನೀಡಿದ ನೋಟಿಸ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಪೀಠ ಈ ಸೂಚನೆ ನೀಡಿದೆ.

ಅಲ್ಲದೆ, ರಾಜ್ಯ ಸರ್ಕಾರ, ಬಿಬಿಎಂಪಿ ಮುಖ್ಯ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿ ಸೇರಿದಂತೆ ಅರ್ಜಿಯಲ್ಲಿನ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಅರ್ಜಿದಾರರಿಗೆ ಮಾತ್ರ ತಿಳಿವಳಿಕೆ ಪತ್ರ (ನೋಟಿಸ್) ನೀಡಲಾಗಿದೆಯೇ ಅಥವಾ ಅಕ್ರಮವಾಗಿ ಎ ಖಾತೆ ಹೊಂದಲಾಗಿದೆ ಎನ್ನಲಾದ ಎಲ್ಲ 9,736 ಸ್ವತ್ತುಗಳ ಮಾಲೀಕರಿಗೂ ನೋಟಿಸ್ ನೀಡಲಾಗಿದೆಯೇ ಎಂಬ ಬಗ್ಗೆ 10 ದಿನದಲ್ಲಿ ಮಾಹಿತಿ ತಿಳಿಸುವಂತೆ ಪಾಲಿಕೆಗೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್​ 5ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ:ಅರ್ಜಿದಾರರು ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ವಲಯದ ವರದರಾಜಸ್ವಾಮಿ ಬಡಾವಣೆಯ ಸರ್ವೇ ನಂ.1ರಲ್ಲಿ 10/ಎ ಸಂಖ್ಯೆಯ (35*55 ಅಡಿ ವಿಸ್ತೀರ್ಣದ) ಎ ಖಾತೆಯ ನಿವೇಶನ ಹೊಂದಿದ್ದಾರೆ. ಆದರೆ, ಆ ನಿವೇಶನವು ಬಿ ಖಾತೆಯದ್ದಾಗಿದ್ದರೂ ಅಕ್ರಮವಾಗಿ ಎ ಖಾತಾ ಪ್ರಮಾಣ ಪತ್ರ ನೀಡಲಾಗಿದೆ ಎಂಬುದಾಗಿ ಸಹಾಯಕ ಕಂದಾಯ ಅಧಿಕಾರಿ 2023ರ ಜೂನ್​ 5ರಂದು ನೀಡಿದ ವರದಿಯಲ್ಲಿ ತಿಳಿದು ಬಂದಿತ್ತು.

ಆದ್ದರಿಂದ ಎ ಖಾತಾ ಪ್ರಮಾಣ ಪತ್ರವನ್ನು ರದ್ದುಪಡಿಸಿ, ನಿವೇಶನವನ್ನು ಬಿ ಖಾತೆಗೆ ತಾತ್ಕಾಲಿಕವಾಗಿ ಸೇರಿಸಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿ ಬ್ಯಾಟಾಯನಪುರ ವಿಭಾಗದ ಜಂಟಿ ಆಯುಕ್ತರ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ 2023ರ ಜುಲೈ 31ರಂದು ಅರ್ಜಿದಾರರಿಗೆ ತಿಳಿವಳಿಕೆ ಪತ್ರ (ನೋಟಿಸ್) ನೀಡಿದ್ದರು.

ಜೊತೆಗೆ, ಸ್ವತ್ತಿನ ನೈಜ ದಾಖಲಾತಿಗಳೊಂದಿಗೆ ತಿಳಿವಳಿಕೆ ಪತ್ರ ತಲುಪಿದ 15 ದಿನಗಳ ಒಳಗೆ ಯಲಹಂಕ ವಲಯದ ಜಂಟಿ ಆಯುಕ್ತರಿಗೆ ಸಲ್ಲಿಸಬೇಕು. ಇಲ್ಲವಾದರೆ ತಮ್ಮ ಹೇಳಿಕೆ ಏನೂ ಇಲ್ಲವೆಂದು ಭಾವಿಸಿ, ಶಾಶ್ವತವಾಗಿ ಸ್ವತ್ತನ್ನು ಬಿ ಖಾತೆಗೆ ಸೇರಿಸಲಾಗುವುದು ಎಂದು ಕಂದಾಯ ಅಧಿಕಾರಿ ತಿಳಿಸಿದ್ದರು. ಆ ತಿಳಿವಳಿಕೆ ಪತ್ರ ರದ್ಧತಿಗೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರು ಪರ ವಕೀಲ ಪವನ್ ಚಂದ್ರ ಶೆಟ್ಟಿ, ಅರ್ಜಿದಾರರ ನಿವೇಶನದ ಎ ಖಾತಾ ಪ್ರಮಾಣ ಪತ್ರವನ್ನು ರದ್ದುಪಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಮಾಡಿದ್ದಾರೆ. ಈ ಆದೇಶ ಮಾಡುವ ಮುನ್ನ ವಿವರಣೆ ನೀಡಲು ಅರ್ಜಿದಾರರಿಗೆ ಅವಕಾಶ ನೀಡಿಲ್ಲ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ನ್ಯಾಯ ಸಮ್ಮತವಾಗಿಲ್ಲ. ಆದ್ದರಿಂದ ಮುಖ್ಯ ಆಯುಕ್ತರ ಆದೇಶ ಮತ್ತು ಸಹಾಯಕ ಕಂದಾಯ ಅಧಿಕಾರಿಯ ತಿಳಿವಳಿಕೆ ಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಸಹಾಯಕ ಕಂದಾಯ ಅಧಿಕಾರಿಯ ತಿಳಿವಳಿಕೆ ಪತ್ರಕ್ಕೆ ತಡೆ ನೀಡಿತು. ಅಲ್ಲದೆ, ಅರ್ಜಿದಾರರ ನಿವೇಶನ ಎ ಖಾತೆಯಲ್ಲಿಯೇ ಉಳಿಯಲಿದೆ ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ:‘ಪ್ರಾರ್ಥನೆ ಸಲ್ಲಿಸುವುದರಿಂದ ಅಪಾಯವಿದೆ’.. ಅರ್ಜಿ ವಜಾಗೊಳಿಸಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ABOUT THE AUTHOR

...view details