ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ತಿಗಳ ಕುರಿತು ಸುಳ್ಳು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಎಲ್ಲ ಆಸ್ತಿಗಳಿಗೂ ಆಧಾರ್ ಕಾರ್ಡ್ ಮೂಲಕ ಕ್ಯೂ ಆರ್ ಕೋಡ್‌ನಂತಹ ತಂತ್ರಜ್ಞಾನ ವ್ಯವಸ್ಥೆಯನ್ನು ಜಾರಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿತು.
ಬೆಂಗಳೂರಿನ ಬನಶಂಕರಿ ನಿವಾಸಿ ಬಿ.ಕೆ.ಶರ್ಮದಾ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಈ ಸಂಬಂಧ ಡಿ-ಜಿ ಲಾಕರ್ ಯಾಂತ್ರಿಕೃತ ವಿಧಾನವನ್ನು ಅಳವಡಿಸಿಕೊಂಡು ಬಿಬಿಎಂಪಿಯ ಎಲ್ಲ ದಾಖಲೆಗಳನ್ನು ದಾಖಲು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದು, ಈ ಸಂಬಂಧ 2024ರ ಜನವರಿ 4ರಂದು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶನ ಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಗುರುತಿನ ದಾಖಲೆಗಳನ್ನು ಸೇರಿಸಿ ಡಿ-ಜಿ ಲಾಕರ್ ವ್ಯವಸ್ಥೆಯಿಂದ ಎಲ್ಲವನ್ನೂ ಭದ್ರಪಡಿಸುವುದಕ್ಕೆ ಅವಕಾಶವಿದೆ. ಅಲ್ಲದೆ, ಪಾಸ್‌ವರ್ಡ್ ಮೂಲಕ ಅದನ್ನು ಮತ್ತೆ ಪರಿಶೀಲನೆಗೂ ಸಾಧ್ಯವಾಗುತ್ತಿದೆ. ನ್ಯಾಯಾಲಯ ನೀಡುವ ತೀರ್ಪುಗಳನ್ನು ಸಹಾ ಕ್ಯೂ ಆರ್ ಕೋಡ್ ಮೂಲಕ ನೋಡಬಹುದು.
ಅಷ್ಟೇ ಅಲ್ಲದೆ, ಕೆಲ ತೆರಿಗೆ ಪಾವತಿಗೂ ಕ್ಯೂಆರ್ ಕೋಡ್ ಬಳಕೆ ಮಾಡಲಾಗುತ್ತಿದೆ. ಅದರ ಸತ್ಯಾಸತ್ಯತೆ ಪರಿಶೀಲನೆಗೆ ಸ್ಕ್ಯಾನ್ ಮಾಡಿದಲ್ಲಿ ಅದು ಪಾಲಿಕೆ ವೆಬ್ಸೈಟ್ಗೆ ಭೇಟಿ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿಯೂ ಸಹ ತನ್ನ ವ್ಯಾಪ್ತಿಯ ಎಲ್ಲ ಜಮೀನುಗಳ ಖಾತೆಗಳು, ಯೋಜನೆ ಮಂಜೂರಾತಿಗಳು, ತೆರಿಗೆ ಪಾವತಿ ಮಾಡುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವ ವ್ಯವಸ್ಥೆ ಜಾರಿ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ, ಅರ್ಜಿದಾರರ ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳು ತಮ್ಮಲ್ಲಿ ಇಲ್ಲ ಎಂದು ಬಿಬಿಎಂಪಿ ಕಂದಾಯ ಅಧಿಕಾರಿ ಹೇಳಿಕೆಗೆ ಸಂಶಯ ವ್ಯಕ್ತಪಡಿಸಿದ ನ್ಯಾಯಪೀಠ, ಆಸ್ತಿ ತೆರಿಗೆ ಪಾವತಿ ಮಾಡಿರುವ ಸಂಬಂಧ ಬಿಬಿಎಂಪಿ ಆಸ್ತಿ ತೆರಿಗೆ ಪೋರ್ಟ್‌ಲ್‌ನಲ್ಲಿ ಪರಿಶೀಲನೆ ನಡೆಸಿತು.
ಈ ಪೋರ್ಟಲ್‌ನಲ್ಲಿ ಅರ್ಜಿದಾರರು, ಮತ್ತವರ ಪೋಷಕರ ಹೆಸರು ಮತ್ತು ಅರ್ಜಿ ಸಂಖ್ಯೆ ಸೇರಿ ಎಲ್ಲ ಅಂಶಗಳು ಲಭ್ಯವಿತ್ತು. ಈ ಎಲ್ಲ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುವಾಗ ದಾಖಲೆಗಳು ಲಭ್ಯವಿಲ್ಲ ಎಂದು ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ನಕಲಿ ಮತ್ತು ಸುಳ್ಳು ಎಂದು ಕಂದಾಯ ಅಧಿಕಾರಿ ತಮ್ಮ ವಕೀಲರ ಮೂಲಕ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಕಂದಾಯ ಅಧಿಕಾರಿ ಈ ರೀತಿ ಗಂಭೀರ ಆರೋಪವನ್ನು ಮಾಡಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಪ್ರಕರಣವನ್ನು ಪರಿಶೀಲಿಸಿ ಪಾಲಿಕೆ ಪರ ವಕೀಲರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆದ ಕಂದಾಯ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚನೆ ನೀಡಿದೆ.