ಬೆಂಗಳೂರು: ಮ್ಯಾನ್ ಹೋಲ್ ಶುಚಿಗೊಳಿಸುವಾಗ ಕಾರ್ಮಿಕನೊಬ್ಬ ಸಾವಿಗೀಡಾದ ಪ್ರಕರಣದಲ್ಲಿ ಮೃತನ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ ಗ್ರಾಮ ಪಂಚಾಯ್ತಿಯನ್ನೂ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮೃತ ಕಾರ್ಮಿಕ ನರಸಿಂಹಯ್ಯನ ಪತ್ನಿ ನಾಗಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಆಲಿಸಿದ ನ್ಯಾ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಮೃತರ ಪತ್ನಿಗೆ ಮನೆ ಸಹಿತ ನಿವೇಶನ ಮರು ಮಂಜೂರು ಮಾಡುವಂತೆ ಸೂಚನೆ ನೀಡಿದೆ. ಅಲ್ಲದೇ, ಉಳ್ಳವರು ಮತ್ತು ಉಳ್ಳದವರ ನಡುವಿನ ಹಕ್ಕುಗಳ ಕುರಿತು ಪ್ರಸ್ತಾಪಿಸಿ, ಉಳ್ಳವರು ಉಳ್ಳದವರ ಹಕ್ಕುಗಳನ್ನು ದಮನ ಮಾಡುವುದನ್ನು ಕೈಬಿಡಬೇಕು ಎಂದು ಸೂಚನೆ ನೀಡಿದೆ.
ಜಿಲ್ಲಾಧಿಕಾರಿ ಪಿಡಿಒಗೆ ದಂಡ: ಅರ್ಜಿದಾರರಿಗೆ ಕಟ್ಟಿದ ಮನೆಯನ್ನೇ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಜತೆಗೆ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೂವರು ಸೇರಿ 50 ಸಾವಿರ ರೂ. ಮತ್ತು ಗ್ರಾಮ ಪಂಚಾತಿ 50 ಸಾವಿರ ರೂಪಾಯಿಗಳನ್ನು ಸೇರಿಸಿ 1 ಲಕ್ಷ ರೂ.ಗಳನ್ನು ಅರ್ಜಿದಾರರಾರಿಗೆ ನೀಡಬೇಕು ಎಂದು ನ್ಯಾಯಾಲಯ ನಿರ್ದೆಶನ ನೀಡಿದೆ.
ಪಂಚಾಯಿತಿ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ: ನಿವೇಶನದಲ್ಲಿ ಮನೆ ಕಟ್ಟಿಲ್ಲವೆಂದು ಹಂಚಿಕೆ ರದ್ದು ಪಡಿಸಿದ್ದ ಗ್ರಾಮ ಪಂಚಾಯಿತಿ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿ, ಬಿಡಬ್ಲು ಎಸ್‌ಎಸ್‌ಬಿ ನಿರ್ಲಕ್ಷ್ಯದಿಂದ ನರಸಿಂಹಯ್ಯ ಸಾವನ್ನಪ್ಪಿದ್ದಾರೆ. ಅದರೆ ಅವರಿಗೆ ನೀಡಿರುವ ನಿವೇಶನ ರದ್ದು ಮಾಡಿರುವ ಬಗ್ಗೆ ಗ್ರಾ. ಪಂ ಧೋರಣೆ ನ್ಯಾಯಸಮ್ಮತವಲ್ಲ ಎಂದು ತಿಳಿಸಿದೆ.