ಬೆಂಗಳೂರು: ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ನ್ಯಾಯಮಂಡಳಿ ನೀಡಿರುವ 20 ಸಾವಿರ ರೂಪಾಯಿ ಪರಿಹಾರ ಅತ್ಯಲ್ಪವಾಗಿದ್ದು, ಹೆಚ್ಚುವರಿ ಪರಿಹಾರ ನೀಡಲು ಇನ್ಶೂರೆನ್ಸ್ ಕಂಪನಿಗೆ ಆದೇಶಿಸಬೇಕು ಎಂದು ಕೋರಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದ ಅರ್ಜಿದಾರನಿಗೆ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ನೀಡಿರುವ ಆದೇಶ ಪ್ರಶ್ನಿಸಿ ಎಂದು ಬಳ್ಳಾರಿಯ ವೀರಭದ್ರಯ್ಯ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ತೀರ್ಪಿನ ಸಾರಾಂಶ:ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ವ್ಯಕ್ತಿ ಅಪಘಾತದ ಬಳಿಕ ತನಗೆ ತೀವ್ರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ದೇಹದ ಹಲವು ಅಂಗಾಂಗಗಳು ವೈಫಲ್ಯವಾಗಿವೆ. ಇದರಿಂದಾಗಿ ತನ್ನ ಜೀವಿತಾವಧಿಯೇ ಕಡಿತಗೊಂಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 18 ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರು ಅಪಘಾತದ ಬಳಿಕ ಮೊದಲಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆ ಪ್ರಕಾರ ವೈದ್ಯಾಧಿಕಾರಿ ರೇಡಿಯಾಲಾಜಿಕಲ್ ಪರೀಕ್ಷೆಗಳನ್ನು ನಡೆಸಿದ್ದರ ಆಧಾರದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ (injuries are simple in nature) ಎಂದು ವರದಿ ಕೊಟ್ಟಿದ್ದಾರೆ.
ಅಲ್ಲದೇ, ಅರ್ಜಿದಾರ ವೀರಭದ್ರಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗಿ ಹಾಗೂ ಸುದೀರ್ಘ ಅವಧಿ ಚಿಕಿತ್ಸೆ ಪಡೆದಿದ್ದಾಗಿ ಹೇಳಿದ್ದಾರೆ. ಆದರೆ, ಈ ಮೊದಲೇ ಅಸ್ತಿತ್ವದಲ್ಲಿದ್ದ ಹೃದಯ ಸಂಬಂಧಿ ಕಾಯಿಲೆಯನ್ನು ಮುಚ್ಚಿಟ್ಟಿದ್ದಾರೆ. ಸಾಕ್ಷ್ಯಗಳ ಅಡ್ಡ ಪರೀಕ್ಷೆ ವೇಳೆ ಗಾಯಾಳುವಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೃದಯ ಸಂಬಂಧಿ ಕಾಯಿಲೆಗಳು ಥಟ್ಟನೆ ಬರುವಂಥದ್ದಲ್ಲ ಎಂದು ಹೇಳಿದ್ದಾರೆ. ಇನ್ನು, ಅರ್ಜಿದಾರ ಹೃದಯ ಸಂಬಂಧಿ ಕಾಯಿಲೆಗೆ ಸರ್ಕಾರಿ ಯೋಜನೆ ಅಡಿ ಚಿಕಿತ್ಸೆ ಪಡೆದಿದ್ದು, ದಾಖಲೆಗಳನ್ನು ತಿರುಚಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಪೀಠ ಅಭಿಪ್ರಾಯಪಟ್ಟಿದೆ.