ಬೆಂಗಳೂರು :ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನೇ ವ್ಯಕ್ತಿಯೊಬ್ಬರ ಆದಾಯ ಎಂಬುದಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಅಂಕಿಅಂಶಗಳನ್ನು ಪರಿಗಣಿಸಿ ಪರಿಹಾರ ನೀಡುವುದಕ್ಕೆ ಮೋಟಾರು ವಾಹನಗಳ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಪ್ರಭಾಕರ ಶಾಸ್ತ್ರಿ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಪರಿಹಾರ ಮೊತ್ತವನ್ನು ಕಡಿಮೆ ಮಾಡಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಮೃತರು ಬಟ್ಟೆ ವ್ಯಾಪಾರ ಮಾಡುತ್ತಿದ್ದು ಮಾಸಿಕ 50 ಸಾವಿರಗಳನ್ನು ದುಡಿಯುತ್ತಿದ್ದರು ಎಂಬುದಾಗಿ ಮೃತರ ಪತ್ನಿ ತಿಳಿಸಿದ್ದಾರೆ. ಆದರೆ, ಈ ವಾದವನ್ನು ಪುಷ್ಟೀಕರಿಸಲು ಯಾವುದೇ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ. ಬದಲಾಗಿ, ಮೃತರಿಗೆ ಸಂಬಂಧಿಸಿದ ಎರಡು ಬ್ಯಾಂಕ್ ಪಾಸ್‌ಬುಕ್‌ಗಳನ್ನು ಸಲ್ಲಿಸಿದ್ದಾರೆ. ಒಂದು ಮೃತರು ಮತ್ತವರ ಪತ್ನಿಯ ಜಂಟಿ ಖಾತೆಯಾಗಿದೆ. ಮತ್ತೊಂದು ಮೃತರ ಖಾತೆಯಾಗಿದ್ದು, ಎರಡು ಕೂಡಾ ವ್ಯವಹಾರ ಖಾತೆಗಳಲ್ಲ.
ಅಲ್ಲದೆ ಮಾಸಿಕ 50 ಸಾವಿರ ರೂ.ಗಳನ್ನು ದುಡಿಯುತ್ತಿರುವುದನ್ನು ನಂಬಿದರೂ ಅದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಈ ಸಂಬಂಧ ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಹೀಗಾಗಿ ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನೇ ಮಾಸಿಕ ಆದಾಯ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ನ್ಯಾಯಾಧಿಕರಣ 23.3 ಲಕ್ಷ ರೂ ಪರಿಹಾರ ಪಾವತಿಸುವಂತೆ ಸೂಚನೆ ನೀಡಿದ್ದ ಆದೇಶವನ್ನು ಬದಲಾಯಿಸಿ 16.00 ಲಕ್ಷ ರೂ.ಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ.