ಕರ್ನಾಟಕ

karnataka

ETV Bharat / state

PSI Scam: ಆರೋಪಿಗಳ ಹೊರತುಪಡಿಸಿ ನೇಮಕ ಪ್ರಕ್ರಿಯೆ ಸಾಧ್ಯವೇ ಎಂದು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಸಾಧ್ಯವಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.

high-court-hearing-plea-on-psi-recruitment-scam
ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ

By

Published : Jun 15, 2023, 8:34 PM IST

Updated : Jun 15, 2023, 8:49 PM IST

ಬೆಂಗಳೂರು : ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪಿಗಳನ್ನು ಹೊರತುಪಡಿಸಿ ಇನ್ನುಳಿದ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಸಾಧ್ಯವೇ ಎಂಬುದರ ಕುರಿತು ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಸರ್ಕಾರವನ್ನು ಕೇಳಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಯಾವುದೇ ಆರೋಪವಿಲ್ಲದ ಸುಮಾರು 100ಕ್ಕೂ ಹೆಚ್ಚು ಅಭ್ಯರ್ಥಿಗಳು ಮರುಪರೀಕ್ಷೆಗೆ ಮುಂದಾಗಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದ್ರ ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹಾಜರಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಅವರನ್ನು ಉದ್ದೇಶಿಸಿ, ಈಗಾಗಲೇ ನೇಮಕವಾಗಿದ್ದ ಆರೋಪ ಮುಕ್ತರಾಗಿರುವವರ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿದ್ದೀರಿ. ಈ ಆರೋಪ ಮುಕ್ತರಾಗಿರುವವರಿಗೆ ಪ್ರತ್ಯೇಕ ಸಾಮರ್ಥ್ಯ ಪರೀಕ್ಷೆ ನಡೆಸಿ ನೇಮಕಾತಿ ಪಟ್ಟಿ ಹೊರಡಿಸಲು ಸಾಧ್ಯವಿದೆಯೇ ಪರಿಶೀಲಿಸಿ ಎಂದು ಪೀಠ ತಿಳಿಸಿತು.

ಇದಕ್ಕೆ ಉತ್ತರಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ನೇಮಕಾತಿ ಮಾಡಬಹುದು, ಆದರೆ ಮುಂದೆ ಇವರ ಮೇಲೆಯೇ ಯಾವುದಾದರೂ ಆರೋಪ ಎದುರಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆರೋಪ ಮುಕ್ತರು ಎಂದು ನೀವೇ (ಸರ್ಕಾರ) ಹೇಳುತ್ತಿದ್ದು, ಆರೋಪ ಎದುರಾದರೆ ಕಾನೂನು ಕ್ರಮ ಎಂದು ತಿಳಿಸುತ್ತಿದ್ದೀರಿ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅಲ್ಲದೆ, ಆರೋಪ ಮುಕ್ತರಿಗೆ ಪ್ರತ್ಯೇಕ ಪರೀಕ್ಷೆ ನಡೆಸಿ ನೇಮಕ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ಈ ಸಂಬಂಧ ಸರ್ಕಾರದೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠವು ಸರ್ಕಾರ ಮತ್ತು ಅರ್ಜಿದಾರರಿಂದ ಪಡೆದ ಸರ್ವಸಮ್ಮತ ಅಭಿಪ್ರಾಯ ನ್ಯಾಯಾಲಯಕ್ಕೆ ನೀಡಲು 10 ದಿನಗಳ ಕಾಲಾವಕಾಶವನ್ನು ನೀಡಿದೆ. ಮುಂದಿನ ವಿಚಾರಣೆಯನ್ನು ಜೂನ್​ 27ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ:ರಾಜ್ಯದಲ್ಲಿ ನಡೆದಿದ್ದ 545 ಹುದ್ದೆಗಳ ಪೊಲೀಸ್​ ಸಬ್ ​ಇನ್​ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ವಿದ್ಯುನ್ಮಾನ ಉಪಕರಣಗಳನ್ನು ಬಳಕೆ ಮಾಡಿರುವುದು. ಒಎಂಆರ್ ಶೀಟ್ ತಿದ್ದುವ ಮೂಲಕ ಆಯ್ಕೆ ಆಗಿರುವ ಸಂಬಂಧ ಆರೋಪ ಎದುರಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಸುಮಾರು 100ಕ್ಕೂ ಹೆಚ್ಚು ಮಂದಿ ಮತ್ತು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್ ಪಾಲ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.

ಈ ನಡುವೆ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಪ್ರಾಮಾಣಿಕ ಅಭ್ಯರ್ಥಿಗಳು, ಪಿಎಸ್​ಐ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿರುವ ಸರ್ಕಾರದ ಆದೇಶ ರದ್ದು ಮಾಡಬೇಕು. ಜೊತೆಗೆ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :Divorce : ದಂಪತಿ ಒಂದೇ ಮನೆಯಲ್ಲಿದ್ದ ಕಾರಣಕ್ಕೆ ವಿಚ್ಛೇದನ ನಿರಾಕರಿಸುವಂತಿಲ್ಲ : ಹೈಕೋರ್ಟ್

Last Updated : Jun 15, 2023, 8:49 PM IST

ABOUT THE AUTHOR

...view details