ಕರ್ನಾಟಕ

karnataka

ETV Bharat / state

ಹೈಕೋರ್ಟ್ ಕಣ್ಗಾವಲಿನಲ್ಲಿ ಪಿಎಸ್ಐ ನೇಮಕ ಹಗರಣದ ತನಿಖೆ: ಸಮಗ್ರ ವರದಿ ಸಲ್ಲಿಸಲು ಸಿಐಡಿಗೆ ಸೂಚನೆ

ಪಿಎಸ್‌ಐ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಅತ್ಯಂತ ಗಂಭೀರ ಸ್ವರೂಪದ ಸಂಗತಿ. ಪ್ರತಿಯೊಂದು ಅಂಶದ ಕುರಿತು ಸೂಕ್ತ ಹಾಗೂ ಸಮರ್ಪಕ ತನಿಖೆ ನಡೆಸಬೇಕು. ಸತ್ಯ ಸಂಗತಿ ಬಯಲಿಗೆಳೆಯಬೇಕು ಎಂದು ಸಿಐಡಿ ಡಿಜಿಪಿ ಸಂಧು ಅವರಿಗೆ ಹೈಕೋರ್ಟ್ ಆದೇಶಿಸಿದೆ.

high-court-hearing-on-psi-recruitment-scam-case
ಪಿಎಸ್ಐ ನೇಮಕಾತಿ ಹಗರಣ

By

Published : Jul 1, 2022, 9:02 AM IST

ಬೆಂಗಳೂರು:ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಶಾಮೀಲಾದ ಯಾರೇ ಪ್ರಭಾವಶಾಲಿಗಳಾಗಲಿ, ಸಚಿವರಾಗಲಿ, ಅಧಿಕಾರಿಗಳಾಗಲಿ.. ಯಾರೇ ಆದರೂ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಸಿಐಡಿಗೆ ನಿರ್ದೇಶನ ನೀಡಿದೆ.

ಪಿಎಸ್ಐ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನದ ಸಿ.ಎನ್. ಶಶಿಧರ್ ಮತ್ತು ಮಂಡ್ಯದ ಆರ್. ಶರತ್‌ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುವಾಗ ಕೋರ್ಟ್​ನಲ್ಲಿ ಖುದ್ದು ಹಾಜರಿದ್ದ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸ್ ಮಹಾ ನಿರ್ದೇಶಕ ಪಿ.ಎಸ್. ಸಂಧು ಅವರಿಗೆ ತನಿಖೆಗೆ ಸಂಬಂಧಿಸಿದ ಪ್ರಗತಿ ವರದಿ ಸಲ್ಲಿಸುವಂತೆ ಸೂಚಿಸಿತು. ಈ ಸಂದರ್ಭದಲ್ಲಿ ಡಿಜಿಪಿ ಸಂಧು ಅವರು ತನಿಖೆಯ ಪ್ರಗತಿ ಕುರಿತಾದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು.

ಪೊಲೀಸ್ ಸಬ್ ಇನ್ಸ್​ಪೆಕ್ಟರ್ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಅತ್ಯಂತ ಗಂಭೀರ ಸ್ವರೂಪದ ಸಂಗತಿ. ಪೊಲೀಸರು ಹಾಗೂ ಗಣ್ಯರು ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ವಿರುದ್ಧ ಆರೋಪಗಳಿದ್ದು, ಪೊಲೀಸ್ ಅಧಿಕಾರಿಗಳೇ ಮಧ್ಯವರ್ತಿಗಳಿದ್ದಾರೆ. ಹೀಗಾಗಿ, ಪ್ರತಿಯೊಂದು ಅಂಶದ ಕುರಿತು ಸೂಕ್ತ ಹಾಗೂ ಸಮರ್ಪಕ ತನಿಖೆ ನಡೆಸಬೇಕು. ಸತ್ಯ ಸಂಗತಿ ಬಯಲಿಗೆಳೆಯಬೇಕು ಎಂದು ಡಿಜಿಪಿ ಸಂಧು ಅವರಿಗೆ ಆದೇಶಿಸಿತು.

ಹಗರಣದಲ್ಲಿ ಯಾವುದೇ ಸಚಿವ, ಅಧಿಕಾರಿ ಅಥವಾ ಪ್ರಭಾವಿ ವ್ಯಕ್ತಿ ಇದ್ದರೂ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಹೈಕೋರ್ಟ್ ಈ ಪ್ರಕರಣದ ತನಿಖೆಯ ಮೇಲೆ ಸಂಪೂರ್ಣ ನಿಗಾ ವಹಿಸಲಿದೆ ಎಂದು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ನೇತೃತ್ವದ ಏಕ ಸದಸ್ಯ ಪೀಠವು ತನಿಖಾಧಿಕಾರಿಗಳಿಗೆ ತಿಳಿಸಿ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು. ಅಂದು ಪ್ರಕರಣದ ತನಿಖೆಯ ಪ್ರಗತಿಯ ಕುರಿತು ಸಮಗ್ರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆಯೂ ಸಂಧು ಅವರಿಗೆ ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ:ಇಂದಿನಿಂದ ಮಹಾನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ; ನಿಯಮ ಮೀರಿದರೆ ದಂಡವೆಷ್ಟು ಗೊತ್ತಾ?!

ABOUT THE AUTHOR

...view details