ಕರ್ನಾಟಕ

karnataka

ETV Bharat / state

ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ರಕ್ಷಣೆಗೆ ತಜ್ಞ ಸಂಸ್ಥೆ ನೇಮಿಸಲು ಸರ್ಕಾರದ ನಿಲುವು ಕೇಳಿದ ಹೈಕೋರ್ಟ್ - ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ರಕ್ಷಣೆ,

ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ರಕ್ಷಣೆಗೆ ತಜ್ಞ ಸಂಸ್ಥೆ ನೇಮಿಸಲು ಸರ್ಕಾರದ ನಿಲುವನ್ನು ಹೈಕೋರ್ಟ್​ ಕೇಳಿದೆ.

Great Indian Bustard Bird,  Great Indian Bustard Bird Protection,  Great Indian Bustard Bird Protection news, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ರಕ್ಷಣೆ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ರಕ್ಷಣೆ ಸುದ್ದಿ,
ಸಂಗ್ರಹ ಚಿತ್ರ

By

Published : Jan 9, 2021, 6:14 AM IST

ಬೆಂಗಳೂರು :ರಾಜ್ಯದಲ್ಲಿರುವ ಅಪರೂಪದ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ (ಜಿಐಬಿ) ಪಕ್ಷಿ ಸಂಕುಲದ ರಕ್ಷಣೆ ಮತ್ತು ನೈಸರ್ಗಿಕ ವಾಸಸ್ಥಾನ ಕುರಿತು ಅಧ್ಯಯನ ನಡೆಸಲು ತಜ್ಞ ಸಂಸ್ಥೆಯನ್ನು ನೇಮಿಸಲು ಸಾಧ್ಯವೇ ಎಂಬ ಬಗ್ಗೆ ಸರ್ಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಜಿಐಬಿ ಪಕ್ಷಿ ಸಂಕುಲದ ರಕ್ಷಣೆಗೆ ತುರ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಳ್ಳಾರಿಯ ಪರಿಸರವಾದಿ ಎಡ್ವರ್ಡ್ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಜಿಐಬಿ ಪಕ್ಷಿ ಸಂಕುಲದ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವರದಿ ಸಿದ್ಧಪಡಿಸುವಂತೆ ಸಸ್ತನಿಗಳ ತಜ್ಞರಿಗೆ ಬಳ್ಳಾರಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ವರದಿ ಸಲ್ಲಿಸಲು ಸರ್ಕಾರ ಸಂಪರ್ಕಿಸಿದ ವ್ಯಕ್ತಿಯು ಸಸ್ತನಿ ಕುರಿತು ಅಧ್ಯಯನ ನಡೆಸುವವರಾಗಿದ್ದಾರೆ. ಅವರು ಜಿಐಬಿ ಬಗ್ಗೆ ಮಾಹಿತಿ ಹೊಂದಿರುವ ವ್ಯಕ್ತಿಯಲ್ಲ, ಪಕ್ಷಿ ವಿಜ್ಞಾನಿಯೂ ಅಲ್ಲ. ಅಂತಹವರೊಂದಿಗೆ ಸಮಾಲೋಚಿಸಿರುವ ಸರ್ಕಾರದ ನಡೆ ಲೋಪದಿಂದ ಕೂಡಿದೆ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಹಾಗೂ ವೈಲ್ಡ್ ಲೈಫ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಜಿಐಬಿ ಬಗ್ಗೆ ಹೆಚ್ಚು ಅಧ್ಯಯನ ನಡೆಸಿರುವ ತಜ್ಞರು ಇದ್ದು, ಅವರನ್ನು ಸರ್ಕಾರ ಸಂಪರ್ಕಿಸಬಹುದಾಗಿತ್ತು ಎಂದರು.

ಮಧ್ಯಪ್ರವೇಶಿಸಿದ ಪೀಠ, ಜಿಐಬಿ ರಕ್ಷಣೆ ಕುರಿತು ಅಧ್ಯಯನ ನಡೆಸಲು ತಜ್ಞ ಸಂಸ್ಥೆಯನ್ನು ನೇಮಿಸುವುದು ಸೂಕ್ತ. ಅದರಂತೆ ಅರ್ಜಿದಾರರು ತಿಳಿಸಿರುವ ಎರಡು ಸಂಸ್ಥೆಗಳೂ ಸೇರಿದಂತೆ ಯಾವುದೇ ಸೂಕ್ತ ತಜ್ಞ ಸಂಸ್ಥೆಯನ್ನು ನೇಮಕ ಮಾಡಬಹುದೇ ಎಂಬ ಬಗ್ಗೆ ಜ.21ರೊಳಗೆ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಕೋರಿಕೆ - ಜಿಐಬಿ ದೇಶದಲ್ಲಿರುವ ಅತ್ಯಂತ ಅಪರೂಪದ ಪಕ್ಷಿ ಸಂಕುಲವಾಗಿದೆ. ಪಶ್ಚಿಮಘಟ್ಟ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಮಾತ್ರ ಕಾಣಸಿಗುತ್ತವೆ. ರಾಜ್ಯದಲ್ಲಿ ಬಳ್ಳಾರಿಯ ಸಿರುಗುಪ್ಪೆಯಲ್ಲೂ ಈ ಪಕ್ಷಿಗಳಿವೆ. ಆದರೆ, ಈ ಪ್ರದೇಶದಲ್ಲಿ ಜೆಎಸ್‌ಡಬ್ಲ್ಯೂ ಸಂಸ್ಥೆ 250 ಎಕರೆ ಭೂಮಿ ಖರೀದಿಸಿ ವಾಚ್ ಟವರ್ ನಿರ್ಮಿಸುತ್ತಿದೆ.

ಟವರ್​ ನಿರ್ಮಾಣದಿಂದ ತಳಮಟ್ಟದಲ್ಲೇ ಹಾರಾಡುವ ಜಿಐಬಿ ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಆದ್ದರಿಂದ, ಸ್ಥಳದಲ್ಲಿ ನಡೆಸುತ್ತಿರುವ ಕಾಮಗಾರಿ ಸ್ಥಗಿತಗೊಳಿಸಬೇಕು. ವಾಚ್ ಟವರ್‌ಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಜಿಐಬಿ ಪಕ್ಷಿಗಳ ಸಂರಕ್ಷಣೆಗೆ ಅಗತ್ಯ ಕ್ರಮ ಜರುಗಿಸಲು ಸೂಚಿಸುವಂತೆ ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details