ಬೆಂಗಳೂರು:ನಗರದ ದೂರವಾಣಿ ನಗರದಿಂದ ಕೆಂಪಾಪುರದವರೆಗಿನ ಮೆಟ್ರೋ ಮಾರ್ಗದ ಕಾಮಗಾರಿಗಾಗಿ 203 ಮರಗಳನ್ನು ತೆರವುಗೊಳಿಸುವುದು, 45 ಮರಗಳನ್ನು ಸ್ಥಳಾಂತರ ಮಾಡುವುದಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಟಿ. ದತ್ತಾತ್ರೇಯ ದೇವರು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಮತ್ತು ಎಂ.ಜೆ.ಎಸ್ ಕಮಲ್ ಅವರಿದ್ದ ಪೀಠ, ಮರ ಅಧಿಕಾರಿಗೆ ಅನುಮತಿ ನೀಡಿ ಆದೇಶಿಸಿದೆ.
ಮೆಟ್ರೋ ಕಾಮಗಾರಿ ನಡೆಯುವ ಪ್ರದೇಶಗಳ ಸುತ್ತಲ ಪ್ರದೇಶಗಳಲ್ಲಿ ಸಣ್ಣ ಕಾಡುಗಳ ನಿರ್ಮಾಣ ಮಾಡುವುದಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರ ಕೋರಿಕೆ ತಿರಸ್ಕರಿಸಿದ ನ್ಯಾಯಪೀಠ, ನಗರ ಪ್ರದೇಶದಲ್ಲಿ ಈ ರೀತಿಯ ಅರಣ್ಯ ಮಾಡುವಷ್ಟು ಸ್ಥಳಾವಕಾಶವಿಲ್ಲ ಎಂದು ತಿಳಿಸಿದೆ. ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು, ಮೆಟ್ರೋ ರೈಲು ಯೋಜನೆ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಹೊಂದಿದೆ. ಕೆಲ ಕಾರಣಗಳಿಂದ ಕಾಮಗಾರಿಗಳು ವಿಳಂಬವಾಗಿತ್ತು. ಮತ್ತೆ ವಿಳಂಬವಾದರೆ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆ ಆಗಲಿದೆ. ಆದ್ದರಿಂದ ಕಾಮಗಾರಿಯ ವೇಗ ಹೆಚ್ಚಳ ಮಾಡುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.
ಮೆಟ್ರೋ ಯೋಜನೆ ಅತ್ಯಂತ ದಕ್ಷ ಮತ್ತು ಪರಿಸರ ಸ್ನೇಹಿಯಾಗಿದೆ. ಯೋಜನೆಯಿಂದ ಜನರ ಪ್ರಯಾಣದ ಸಮಯ ಉಳಿಯಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲಿದ್ದು, ವಾಹನಗಳ ಸುಗಮ ಸಂಚಾರಕ್ಕೆ ನೆರವಾಗಲಿದೆ. ಜೊತೆಗೆ, ಆರ್ಥಿಕವಾಗಿ ಲಾಭದಾಯಕವಾಗಿದೆ. ಆದ್ದರಿಂದ ಈ ಯೋಜನೆಗಾಗಿ ಅಗತ್ಯವಿರುವ ಮರಗಳನ್ನು ತೆರವು ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿದರು.