ಬೆಂಗಳೂರು:ನಗರದ ಹಡ್ಸನ್ ವೃತ್ತದ ಬಳಿ ಕರ್ನಾಟಕ ಪ್ರದೇಶ ಕೃಷಿಕ್ ಸಮಾಜ ಸಂಸ್ಥೆ ನಿರ್ಮಿಸಿರುವ ಕಟ್ಟಡವನ್ನು (ಹಾಪ್ ಕಾಮ್ಸ್ ಆಗಿ ಹೆಸರುವಾಸಿಯಾದ) ಉಪಯೋಗಿಸಿಕೊಳ್ಳಲು ಕೃಷಿಕ್ ಸಮಾಜಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಕಬ್ಬನ್ ಉದ್ಯಾನ ವ್ಯಾಪ್ತಿ ಪ್ರದೇಶದಲ್ಲಿ ಅಕ್ರಮವಾಗಿ ಹಲವು ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಆಶೋಕ್ ಎಸ್ ಕಿಣಗಿ ಅವರಿದ್ದ ನ್ಯಾಯಪೀಠ, ಕಟ್ಟಡವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಕೃಷಿಕ್ ಸಮಾಜಕ್ಕೆ ಅವಕಾಶ ಕಲ್ಪಿಸಿದೆ. ಅರ್ಜಿಯ ಈ ಹಿಂದೆ ನಡೆದ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನದಂತೆ ಫೆಬ್ರವರಿ 4ರಂದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಗಾರರ ಸಮ್ಮುಖದಲ್ಲಿ ಕೃಷಿಕ್ ಸಮಾಜದ ಕಟ್ಟಡವಿರುವ ಜಾಗದ ಸರ್ವೇ ಕಾರ್ಯ ನಡೆಸಲಾಗಿದೆ. ಈ ಸರ್ವೇ ಪ್ರಕಾರ ಕೃಷಿಕ್ ಸಮಾಜ ಕಟ್ಟಡವು ಕಬ್ಬನ್ ಪಾರ್ಕ್ ಪ್ರದೇಶದ ವ್ಯಾಪ್ತಿಯಿಂದ ಹೊರಗಿದೆ ಎಂದು ತಿಳಿದು ಬಂದಿದೆ ಎಂದು ಬೆಂಗಳೂರು ನಗರ ಸರ್ವೇ ವಲಯದದ ಸಹಾಯಕ ನಿರ್ದೇಶಕಿ ಹರ್ಷ ಕುಮಾರಿ ಅವರು ನ್ಯಾಯಪೀಠಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ ಕಟ್ಟಡ ಉಪಯೋಗ ಮಾಡಲು ಕೃಷಿಕ್ ಸಮಾಜಕ್ಕೆ ಅನುಮತಿ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಈ ಅನುಮತಿ ಅರ್ಜಿ ಕುರಿತ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಪಪಡಿಸಿದೆ.