ಕರ್ನಾಟಕ

karnataka

By

Published : Feb 10, 2023, 3:58 PM IST

ETV Bharat / state

ಜೀವನಾಂಶದ ಅರ್ಜಿಗಳು ಕಾಲಮಿತಿಯಲ್ಲಿ ಇತ್ಯರ್ಥವಾಗಲಿ: ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ

ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿದೆ.

ಹೈಕೋರ್ಟ್​
ಹೈಕೋರ್ಟ್​

ಬೆಂಗಳೂರು: ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಪತಿಯಿಂದ ವಿಚ್ಛೇದಿತ ಮಹಿಳೆಯರು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳ ಕುರಿತು ಕಾಲಮಿತಿಯಲ್ಲಿ ತೀರ್ಮಾನ ಕೈಗೊಳ್ಳುವುದಕ್ಕಾಗಿ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿಗಳನ್ನು ರಚಿಸಿದೆ.
ವಿಚ್ಚೇದಿತ ಮಹಿಳೆಯೊಬ್ಬರು ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಗೆ 19 ತಿಂಗಳ ಬಳಿಕ ಪತಿ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಪತ್ನಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ (ಜೀವನಾಂಶ) ಅಡಿಯಲ್ಲಿ ಸಲ್ಲಿಕೆ ಮಾಡುವ ಅರ್ಜಿಗಳನ್ನು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು 60 ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂಬ ನಿಯಮವಿದ್ದರೂ, ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ನಾಲ್ಕು ವರ್ಷಗಳ ಕಾಲ ಅರ್ಜಿ ವಿಲೇವಾರಿ ಮಾಡದ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ಜತೆಗೆ, ಅರ್ಜಿಯ ಅರ್ಜಿಗಳನ್ನು ಇತ್ಯರ್ಥಪಡಿಸಲು ಮಾರ್ಗ ಸೂಚಿಗಳನ್ನು ರಚಿಸಿದೆ.

ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆಗಳ ಪರಿಗಣಿಸುವಲ್ಲಿ ವಿಳಂಬ ಮಾಡಿದಲ್ಲಿ ವಿಚ್ಛೇದಿತ ಮಹಿಳೆಗೆ ಇರುವ ಅವಕಾಶವನ್ನು ವಂಚಿಸಿದಂತಾಗಲಿದೆ. ಅಲ್ಲದೆ, ಜೀವನಾಂಶ ಪಡೆಯುವ ಹಕ್ಕು ಕೇವಲ ಭ್ರಮೆ ಆಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅನೇಕ ಕಾರಣಗಳಿಂದ ಪತ್ನಿ ಪತಿಯ ಮನೆಯನ್ನು ತೊರೆಯುತ್ತಾಳೆ. ಅಂತಹ ಸಂದರ್ಭದಲ್ಲಿ ಭೀತಿಗೆ ಒಳಗಾಗುವುದನ್ನು ತಪ್ಪಿಸುವುದು ಮತ್ತು ತೊಂದರೆಗೆ ಸಿಲುಕದಂತೆ ಮಾಡುವುದಕ್ಕಾಗಿ ಕಾಲಮಿತಿಯಲ್ಲಿ ಪರಿಹಾರ ಸಿಗುವಂತೆ ಮಾಡಬೇಕು. ಗಂಡನಿಂದ ನಿರ್ಧಿಷ್ಟ ಮೊತ್ತದ ಜೀವನಾಂಶ ಪಡೆಯಲು ಹೆಂಡತಿ ವರ್ಷಾನುಗಟ್ಟಲೆ ಕಾಯುವಂತೆ ಮಾಡಬಾರದು. ಹೀಗಾಗಿ ವಿಚಾರಣಾ ನ್ಯಾಯಾಲಯಗಳು ಕಾಲಮಿತಿಗೆ ಬದ್ಧವಾಗಿರಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಈವರೆಗೂ ನೀಡಲಾಗುತ್ತಿದ್ದ 15 ಸಾವಿರ ರೂ.ಗಳ ಮಾಸಿಕ ಜೀವನಾಂಶವನ್ನು 50 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿದೆ. ಜತೆಗೆ, ಕಾನೂನು ಹೋರಾಟಕ್ಕಾಗಿ ನೀಡಿದ್ದ 50 ಸಾವಿರ ರೂ. ಗಳನ್ನು 1 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.

ಮಾರ್ಗಸೂಚಿಗಳು:

  • ಅರ್ಜಿ ಸಲ್ಲಿಸಿದ ತಕ್ಷಣ ಇ-ಮೇಲ್, ವಾಟ್ಸ್‌ಆಪ್ ಸೇರಿದಂತೆ ಕಾನೂನು ಪ್ರಕಾರ ಇರುವ ಅವಕಾಶಗಳಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಬೇಕು.
  • ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗೆ ಸಂಬಂಧಿಸಿದಂತೆ ಎರಡು ತಿಂಗಳೊಳಗಾಗಿ ಆಕ್ಷೇಪಣೆ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ಪತ್ನಿಯ ಆಸ್ತಿಗಳ ಕುರಿತಂತೆ ಮಾಹಿತಿ ನೀಡಲು ಎರಡು ತಿಂಗಳ ಕಾಲಾವಕಾಶ ನೀಡಬೇಕು.
  • ಅರ್ಜಿದಾರರ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಸಂಬಂಧ ನಾಲ್ಕು ತಿಂಗಳೊಳಗೆ ಕಕ್ಷಿದಾರರ ವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಹೊರಡಿಸಬೇಕು.
  • ಮಧ್ಯಂತರ ಅರ್ಜಿಗಳನ್ನು ಸಲ್ಲಿಕೆ ಮಾಡಿದ 6 ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು.
  • ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಅನಗತ್ಯವಾಗಿ ಮುಂದೂಡುವ ಪ್ರಕ್ರಿಯೆಗಳನ್ನು ಕೈ ಬಿಡಬೇಕು.
  • ವಿಚಾರಣೆ ಪೂರ್ಣಗೊಳಿಸುವುದಕ್ಕೆ ಪಕ್ಷಗಾರರು ಸೂಕ್ತ ರೀತಿಯಲ್ಲಿ ಸಹಕರಿಸದಿದ್ದಲ್ಲಿ ಜೀವನಾಂಶ ಕೋರಿರುವ ಅರ್ಜಿಗಳನ್ನು ಕಾನೂನಿನ ಪ್ರಕಾರ ನಿರ್ಧರಿಸಿ ಆದೇಶಗಳನ್ನು ನೀಡಲು ನ್ಯಾಯಾಲಯಗಳಿಗೆ ಸಂಪೂರ್ಣ ಅವಕಾಶವಿರಲಿದೆ.
  • ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು 6 ತಿಂಗಳಿಗೂ ಹೆಚ್ಚು ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ:ಸುಪ್ರೀಂಕೋರ್ಟ್​ ಜಡ್ಜ್​ಗಳ ಸಂಖ್ಯೆ 34 ಕ್ಕೇರಿಕೆ.. ದೇಶದಲ್ಲಿ 5 ಕೋಟಿ ಕೇಸ್​​ಗಳು ಬಾಕಿ

ABOUT THE AUTHOR

...view details