ಬೆಂಗಳೂರು:ಅಪ್ರಾಪ್ತೆಯ ಮೇಲೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿ, ದುಷ್ಕೃತ್ಯವನ್ನು ಚಿತ್ರೀಕರಿಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಪ್ರಾಪ್ತನಿಗೆ ಆತನ ತಾಯಿಯ ಕೋರಿಕೆಯ ಮೇರೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತು. ಪ್ರಕರಣದಲ್ಲಿ ಜಾಮೀನು ಕೋರಿ ಧಾರವಾಡದ ಅಪ್ರಾಪ್ತ ತನ್ನ ತಾಯಿಯ ಮೂಲಕ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅನಿಲ್ ಬಿ.ಕಟ್ಟಿ ಅವರಿದ್ದ ನ್ಯಾಯಪೀಠ ಜಾಮೀನು ನೀಡಿತು.
ಆರೋಪಿ ಭವಿಷ್ಯದಲ್ಲಿ ಅಪರಾಧ ಹಿನ್ನೆಲೆಯುಳ್ಳವರೊಂದಿಗೆ ಸಂಪರ್ಕ ಬೆಳೆಸದಂತೆ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಬಾಲ ನ್ಯಾಯಮಂಡಳಿಗೆ ವರದಿ ಸಲ್ಲಿಸಬೇಕು ಎಂದು ತಾಯಿಗೆ ಷರತ್ತು ವಿಧಿಸಲಾಗಿದೆ. ಆರೋಪಿಯ ದೈಹಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಧಾರವಾಡದ ನಿಮಾನ್ಸ್ ಆಸ್ಪತ್ರೆಯಿಂದ ವರದಿ ತರಿಸಿಕೊಂಡ ಕೋರ್ಟ್, ಪರಿಶೀಲನೆ ನಡೆಸಿತು. ಘಟನೆ ನಡೆದಾಗ ಅರ್ಜಿದಾರನಿಗೆ 17 ವರ್ಷವಾಗಿದ್ದು ಮತ್ತು ಆರೋಪಿಯನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳಲು ತಾಯಿ ಸಮರ್ಥಳಾಗಿರುವ ಅಂಶವನ್ನು ಪರಿಗಣಿಸಲಾಗಿದೆ.
ಷರತ್ತುಗಳು: ಆರೋಪಿಯ ಯೋಗಕ್ಷೇಮ ಮತ್ತು ಕಲ್ಯಾಣವನ್ನು ನೋಡಿಕೊಳ್ಳಬೇಕು. ಧಾರವಾಡದ ಬಾಲ ನ್ಯಾಯ ಮಂಡಳಿಗೆ ಮಗನ ಪರವಾಗಿ ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಮಗ ಯಾವುದೇ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಲು ಬಿಡದಂತೆ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು. ಆತ ವ್ಯಾಸಂಗ ಮುಂದುವರಿಸುವ ಅಥವಾ ರಚನಾತ್ಮಕ ಚಟುವಟಿಕೆಗಳನ್ನು ಪಾಲ್ಗೊಳ್ಳುವುದನ್ನು ಖಾತರಿಪಡಿಸಬೇಕು. ಅನುತ್ಪಾದಕ ಮತ್ತು ಮನೋರಂಜನಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ವ್ಯರ್ಥ ಮಾಡದಂತೆ ನೋಡಿಕೊಳ್ಳಬೇಕು. ಅದನ್ನು ದೃಢಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಾಯಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.