ಬೆಂಗಳೂರು:ಅಪ್ರಾಪ್ತೆಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ತನ್ನ ಅಪ್ರಾಪ್ತ ಪುತ್ರಿಯ ಜೊತೆ ಇರಲು ಒಂದು ತಿಂಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪುತ್ರಿಗೆ ಎರಡು ತಿಂಗಳಿದ್ದಾಗ ಪತಿ ಜೈಲು ಪಾಲಾಗಿದ್ದು, ಈವರೆಗೂ ಪುತ್ರಿಯನ್ನು ಕಾಣಲು ಅವಕಾಶವಾಗಿಲ್ಲ. ಆದ್ದರಿಂದ ಪುತ್ರಿಯನ್ನು ಕಂಡು ಜೊತೆಗಿರಲು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರುವ ತನ್ನ ಪತಿ ಶಮಿವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್ ನೀಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮ್ರಿನ್ ತಾಜ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರೆಯ ಪತಿ ಶಮಿವುಲ್ಲಾಗೆ 30 ದಿನಗಳ ಕಾಲ ಪೆರೋಲ್ ಪಡೆಯಲು ಅರ್ಹನಾಗಿದ್ದಾರೆ. ಆದ್ದರಿಂದ ಪೆರೋಲ್ ನೀಡಲು ನಿರಾಕರಿಸಿ 2023ರ ಸೆ.5 ರಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರು ನೀಡಿದ್ದ ಹಿಂಬರಹ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದೆ.
ಅಲ್ಲದೇ, ಅರ್ಜಿದಾರೆಯ ಮನವಿಯಂತೆ ಶಮಿವುಲ್ಲಾ ಅವರನ್ನು 2023ರ ನ. 6 ರಿಂದ ಡಿ.5 ರವರೆಗೆ ಪೆರೋಲ್ ಮೇಲೆ ಬಿಡುಗಡೆ ಮಾಡುವ ಸಂಬಂಧ ಅಧೀಕ್ಷಕರು ಸೂಕ್ತ ಆದೇಶ ಹೊರಡಿಸಬೇಕು. ಈ ವೇಳೆ ಶಮಿವುಲ್ಲಾಗೆ ಅಧೀಕ್ಷಕರು ಸೂಕ್ತ ಷರತ್ತು ವಿಧಿಸಲು ಸ್ವತಂತ್ರರಾಗಿದ್ದಾರೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ. ಅಲ್ಲದೇ, ಪೆರೋಲ್ ಅವಧಿಯಲ್ಲಿನ ಶಮಿವುಲ್ಲಾ ನಡವಳಿಕೆ ಆಧಾರದ ಮೇಲೆ ಪೆರೋಲ್ ವಿಸ್ತರಣೆಗೆ ಕೋರುವ ಅವಕಾಶವನ್ನು ಸಹ ನ್ಯಾಯಾಲಯ ಕಾಯ್ದಿರಿಸಿದೆ.