ಕರ್ನಾಟಕ

karnataka

ETV Bharat / state

ಮಸೀದಿಯಿಂದ‌ ತಹಶೀಲ್ದಾರರನ್ನು ಹೊರದೂಡಿದ ಪ್ರಕರಣ: ವೈದ್ಯನಿಗೆ ಹೈಕೋರ್ಟ್ ಜಾಮೀನು

ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಹೊರಹೋಗುವಂತೆ ಸೂಚಿಸಿದ್ದ ತಹಶೀಲ್ದಾರ್ ಹಾಗೂ ಸಿಬ್ಬಂದಿಯನ್ನೇ ಮಸೀದಿಯಿಂದ ಹೊರದಬ್ಬಿದ ಪ್ರಕರಣ ಸಂಬಂಧ, ಬಂಧನ ಭೀತಿ ಎದುರಿಸುತ್ತಿರುವ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದೆ. 50 ಸಾವಿರ ವೈಯಕ್ತಿಕ ಬಾಂಡ್ ನೀಡಿ ತನಿಖೆಗೆ ಸಹಕರಿಸಬೇಕು, ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

High Court Granted Bail for Doctor Who expelled Tahsildar from mosque
ಮಸೀದಿಯಿಂದ‌ ತಹಶಿಲ್ದಾರ್ ಹೊರದೂಡಿದ ಪ್ರಕರಣ: ವೈದ್ಯನಿಗೆ ಹೈಕೋರ್ಟ್ ಜಾಮೀನು

By

Published : May 15, 2020, 9:41 PM IST

ಬೆಂಗಳೂರು:ಹಾವೇರಿಯ ಜುಮ್ಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಾಗ ಹೊರ ಹೋಗುವಂತೆ ಸೂಚಿಸಿದ ಸ್ಥಳೀಯ ತಹಶೀಲ್ದಾರ್ ಹಾಗೂ ಸಿಬ್ಬಂದಿ ಪ್ರಕರಣದಡಿ ಬಂಧನ ಭೀತಿ ಎದುರಿಸುತ್ತಿರುವ ಆರೋಪಿ ವೈದ್ಯ ಡಾ. ನನ್ನೆಮಿಯಾಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಡಾ. ನನ್ನೆಮಿಯಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಎರಡು ವಾರದೊಳಗೆ ತನಿಖಾಧಿಕಾರಿ ಎದುರು ಹಾಜರಾಗಿ, 50,000 ರೂ. ವೈಯಕ್ತಿಕ ಬಾಂಡ್ ನೀಡಿ ತನಿಖೆಗೆ ಸಹಕರಿಸಬೇಕು. ಪ್ರಕರಣದ ಸಾಕ್ಷ್ಯ ನಾಶಪಡಿಸಲು ಯತ್ನಿಸಬಾರದು ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ: ಕಳೆದ ಏ.17ರಂದು ಮಧ್ಯಾಹ್ನ ವೇಳೆ ಅರ್ಜಿದಾರರು ಸೇರಿದಂತೆ ಐವರು ಆರೋಪಿಗಳು ಹಾವೇರಿ ಜಿಲ್ಲೆಯ ಸವಣೂರು ಪೇಟೆಯ ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು. ಈ ವಿಷಯ ತಿಳಿದು ಅಲ್ಲಿಗೆ ತೆರಳಿದ ತಹಶೀಲ್ದಾರ್ ಲಾಕ್​​ಡೌನ್ ಇರುವುದರಿಂದ ಸಮೂಹಿಕವಾಗಿ ಪ್ರಾರ್ಥನೆ ಮಾಡುವುದು ತಪ್ಪಾಗುತ್ತದೆ ಎಂದು ಕೂಡಲೇ ಮಸೀದಿಯಿಂದ ಹೊರ ಹೋಗುವಂತೆ ಸೂಚಿಸಿದ್ದರು.

ಅಧಿಕಾರಿಗಳ ಸೂಚನೆಗೆ ಬಗ್ಗದ ಆರೋಪಿಗಳು ‘ನಿಮ್ಮ ಡ್ಯೂಟಿ ಎಷ್ಟು ಇದೆ, ಅಷ್ಟು ಮಾಡಿ. ಮಸೀದಿಗೆ ಯಾಕೆ ಬಂದಿರಿ' ಎಂದು ಗದರಿಸಿದ್ದಲ್ಲದೆ, ಎಲ್ಲಾ ಆರೋಪಿಗಳು ಸೇರಿ ತಹಶೀಲ್ದಾರ್ ಮತ್ತು ಅವರ ಸಿಬ್ಬಂದಿಯನ್ನೇ ಮಸೀದಿಯಿಂದ ಹೊರದೂಡಿದ್ದರು. ಈ ಕುರಿತು ತಹಶೀಲ್ದಾರ್ ಏ.18ರಂದು ಪೊಲೀಸರಿಗೆ‌ ದೂರು ನೀಡಿದ್ದರು. ಸವಣೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರಿಂದ ಅರ್ಜಿದಾರರು ಬಂಧನ ಭೀತಿಗೆ ಒಳಗಾಗಿ ಹೈಕೋರ್ಟ್​​ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ABOUT THE AUTHOR

...view details