ಬೆಂಗಳೂರು:ಕೆಲ ಟ್ವಿಟರ್ ಖಾತೆ ನಿರ್ಬಂಧಿಸುವಂತೆ ಆದೇಶಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ಟ್ವಿಟರ್ ಇನ್ಕಾರ್ಪೋರೇಟೆಡ್ಗೆ ಹೈಕೋರ್ಟ್ 10 ದಿನಗಳ ಕಾಲಾವಕಾಶ ನೀಡಿದೆ.
ವ್ಯಕ್ತಿಗತವಾಗಿ ಕೆಲವು ಖಾತೆಗಳನ್ನು ನಿಷೇಧಿಸುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಆದೇಶ ಪ್ರಶ್ನಿಸಿ ಟ್ವಿಟರ್ ಇನ್‌ಕಾರ್ಪೊರೇಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು. ಕೇಂದ್ರದ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಹೈಕೋರ್ಟ್ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿದೆ.
ಇದನ್ನೂ ಓದಿ:ಆಕ್ಷೇಪಾರ್ಹ ಟ್ವಿಟರ್ ಖಾತೆಗಳಿಗೆ ನಿರ್ಬಂಧ ಆದೇಶ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್
ವಿದೇಶಿ ಸಂಸ್ಥೆಯಾದ ಟ್ವಿಟರ್ ಭಾರತೀಯರ ವಾಕ್ಸ್ಬಾತಂತ್ರ್ಯದ ಬಗ್ಗೆ ಹೋರಾಟ ನಡೆಸುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಅರ್ಜಿಯ ಸಿಂಧುತ್ವ ಕಳೆದುಕೊಂಡಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಟ್ವಿಟರ್ ಸಂಸ್ಥೆಯ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿತ್ತು.
ಪ್ರಕರಣದ ಹಿನ್ನೆಲೆ ಏನು:ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ-2000ರ ಸೆಕ್ಷನ್ 69ಎ ಅಡಿ 2021ರ ವಿವಿಧ ದಿನಾಂಕಗಳಲ್ಲಿ ಹಲವು ನೋಟಿಸ್ ನೀಡಿರುವ ಕೇಂದ್ರ ಸರ್ಕಾರ 1,474 ಟ್ವಿಟರ್ ಖಾತೆಗಳು ಹಾಗೂ 175 ಟ್ವೀಟ್‌ಗಳನ್ನು ನಿರ್ಬಂಧಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಕೇಂದ್ರದ ಆದೇಶದಿಂದ ಬಳಕೆದಾರರ ಹಕ್ಕುಗಳ ಉಲ್ಲಂಘನೆ ಆಗಲಿದೆ.
ಯಾವ ಕಾರಣಕ್ಕಾಗಿ ಖಾತೆಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಅಗತ್ಯವೇನಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ವಿವರಿಸಿಲ್ಲ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಐಟಿ ಕಾಯ್ದೆಗೆ ವಿರುದ್ಧ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ:Twitter ವಿರುದ್ಧ FIR ದಾಖಲಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ