ಕರ್ನಾಟಕ

karnataka

ETV Bharat / state

ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ - ಕನ್ನಡ ರಾಜ್ಯೋತ್ಸವ

ಬೆಂಗಳೂರು ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನವೆಂಬರ್​ 1ರಿಂದ 3ರವರೆಗೆ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಹೈಕೋರ್ಟ್​ ಕೆಲವು ನಿಯಮಗಳನ್ನು ತಿಳಿಸಿ ಒಪ್ಪಿಗೆ ನೀಡಿತು.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Oct 31, 2023, 3:29 PM IST

Updated : Oct 31, 2023, 3:38 PM IST

ಬೆಂಗಳೂರು:ರಾಜಧಾನಿ ಬೆಂಗಳೂರು ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ನವೆಂಬರ್ 1ರಿಂದ 3 ದಿನಗಳ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ಕೊಟ್ಟಿದೆ. ಅಲ್ಲದೆ, ಈದ್ಗಾ ಮೈದಾನ ಬಳಕೆ ಮಾಡಲು ಒಂದು ವೇಳೆ ಕಾನೂನು ಅಡಚಣೆಗಳು ಉಂಟಾದಲ್ಲಿ ಅರ್ಜಿದಾರರ ಒಕ್ಕೂಟದಿಂದ ರಾಜ್ಯೋತ್ಸವ ಆಚರಣೆ ಮಾಡಲು ಜಿಲ್ಲಾಡಳಿತದಿಂದ ಪರ್ಯಾಯ ಮೈದಾನ ಒದಗಿಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟ ನಿರ್ದೇನ ನೀಡಿದೆ.

ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ಅವಕಾಶ ನಿರಾಕರಿಸಿ ಜಿಲ್ಲಾಧಿಕಾರಿ ನೀಡಿದ್ದ ಹಿಂಬರಹ ಪ್ರಶ್ನಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಹೈಕೋರ್ಟ್​ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ನಡೆಸಿತು.

ಕರ್ನಾಟಕ ರಾಜ್ಯ ರಚನೆ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ಇಡೀ ರಾಜ್ಯದ ಜನತೆ ಆಚರಣೆ ಮಾಡಬೇಕಾಗಿದ್ದು, ಎಲ್ಲ ಧರ್ಮದವರೂ ಸೇರಿ ಮೂರು ದಿನಗಳ ಕಾಲ ಆಚರಣೆ ಮಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಲಾಗುವುದು. ರಾಜ್ಯ ಬಾವುಟವನ್ನು ಮಾತ್ರ ಧ್ವಜಾರೋಹಣ ಮಾಡಿ, ಇತರೆ ಯಾವುದೇ ಬಾವುಟ ಅಳವಡಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ನೀಡಿದ ಮುಚ್ಚಳಿಕೆ ದಾಖಲಿಸಿಕೊಂಡಿತು. ಬಳಿಕ ಷರತ್ತುಬದ್ದ ಅನುಮತಿ ನೀಡಿ, ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ.

ಒಕ್ಕೂಟದ ಸದಸ್ಯರು ಯಾವುದೇ ಧರ್ಮದ ಧಾರ್ಮಿಕ ಭಾವನೆಗಳ ವಿರುದ್ಧ ಹಾಗೂ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಹೇಳಿಕೆ ನೀಡದಂತೆ ನೋಡಿಕೊಳ್ಳಬೇಕು ಎಂದು ಒಕ್ಕೂಟದ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.

ಜಿಲ್ಲಾಧಿಕಾರಿಗಳ ನಡೆಗೆ ಹೈಕೋರ್ಟ್ ಬೇಸರ:ಮಂಗಳವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ಶ್ರೀಧರ, ಪ್ರಭು ನ್ಯಾಯಪೀಠದ ಮುಂದೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದು ಕರ್ನಾಟಕ ರಚನೆಯಾದ ದಿನದ ಪ್ರಯುಕ್ತ ರಾಜ್ಯ ಉತ್ಸವ ಆಚರಣೆ ಮಾಡಲಾಗುತ್ತದೆ. ಇದು ಧಾರ್ಮಿಕ ಕಾರ್ಯಕ್ರಮ ಅಲ್ಲ. ಎಲ್ಲಾ ಧರ್ಮದವರು ಸೇರಿ ಆಚರಣೆ ಮಾಡಬೇಕಾದ ಕಾರ್ಯಕ್ರಮ. ಹಬ್ಬದ ರೀತಿ ಸಂಭ್ರಮ ಮಾಡಬೇಕಿದೆ. ಅಂತಹ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿತು. ಈ ರೀತಿಯ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಯಾವುದೇ ಆಕ್ಷೇಪ ಮಾಡಬಾರದು. ರಾಜ್ಯ ಸರ್ಕಾರವೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುತ್ತಿರುವಾಗ, ಇಲ್ಲಿ ಮಾತ್ರ ಅಡ್ಡಿಪಡಿಸುತ್ತಿರುವುದು ಏಕೆ ಎಂದು ಕೇಳಿತು.

ಪ್ರಕರಣದ ಹಿನ್ನೆಲೆ:ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನ.1ರಿಂದ 3ರವರೆಗೆ ಕನ್ನಡ ರಾಜ್ಯೋತ್ಸವ ಹಾಗೂ ನಗರ ದೇವತೆ ಅಣ್ಣಮ್ಮ ದೇವಿ ಉತ್ಸವ ಮತ್ತು ಕನ್ನಡ ಸಂಸ್ಕೃತಿಯನ್ನು ಪ್ರಸ್ತುತಪಡಿಸುವ ಸಾಂಸ್ಕೃತಿ ಕಾರ್ಯಕ್ರಮ ಪ್ರದರ್ಶನ ಮಾಡಲು ಅನುಮತಿ ನೀಡುವಂತೆ ಚಾಮರಾಜಪೇಟೆ ನಾಗರಿಕ ಒಕ್ಕೂಟ ಅಕ್ಟೋಬರ್ 17ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.

ಈ ಮನವಿಯನ್ನು ಪರಿಶೀಲಿಸಿದ್ದ ಜಿಲ್ಲಾಧಿಕಾರಿಗಳು ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಿದಲ್ಲಿ ಅದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾದಂತಾಗಲಿದೆ. ಆದ ಕಾರಣ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂ ಓದಿ:ಕನ್ನಡ ಧ್ವಜಕ್ಕೆ ಶಾಸನಬದ್ಧ ಸ್ಥಾನಮಾನ ವಿಚಾರ: ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಭೀಮಪ್ಪ ಗಡಾದ

Last Updated : Oct 31, 2023, 3:38 PM IST

ABOUT THE AUTHOR

...view details