ಕರ್ನಾಟಕ

karnataka

ETV Bharat / state

ಬಾಕಿ ಇರುವ 80 ಕೋಟಿ ಭಿಕ್ಷುಕರ ಸೆಸ್​ ಕುರಿತು ಒಂದು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸಿ : ಹೈಕೋರ್ಟ್

ಭಿಕ್ಷುಕರ ಅಭ್ಯುದಯಕ್ಕಾಗಿ ಸಂಗ್ರಹಿಸಿರುವ ಭಿಕ್ಷುಕರ ಸೆಸ್ ಹಣವನ್ನು ಎರಡು ವಾರಗಳಲ್ಲಿ ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

high court
high court

By ETV Bharat Karnataka Team

Published : Sep 12, 2023, 9:43 PM IST

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ 80 ಕೋಟಿ ರೂ. ಭಿಕ್ಷುಕರ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಕುರಿತು ಮುಂದಿನ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ನಗರದ ರಸ್ತೆಗಳಲ್ಲಿ ಮಕ್ಕಳನ್ನು ಆಟಿಕೆ ಸಾಮಾನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವ ವಿಚಾರವಾಗಿ ಲೆಟ್ಜ್​ಕಿಟ್​ ಫೌಂಡೇಷನ್ 2020ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಎನ್.ಕೆ. ರಮೇಶ್ ವಾದ ಮಂಡಿಸಿ, 2008-09 ರಿಂದ 2023-24ರ ಇಲ್ಲಿಯ ತನಕ ಸಂಗ್ರಹ ಮಾಡಲಾದ ಭಿಕ್ಷುಕರ ಸೆಸ್‌ನ ಒಟ್ಟು ಮೊತ್ತದಲ್ಲಿ 470 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾಗಿದೆ. 80 ಕೋಟಿ ರೂ. ಬಾಕಿ ಇದ್ದು, ಅದನ್ನು ಪಾವತಿಸಲು ಮೂರು ವಾರಗಳ ಕಾಲವಕಾಶ ಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದೊಡ್ಡ ಮೊತ್ತವನ್ನು ಪಾವತಿ ಮಾಡಿದ್ದು, ಕೇವಲ 80 ಕೋಟಿ ರೂ.ಗಳಷ್ಟೇ ಬಾಕಿ ಉಳಿದಿದೆ. ಇಷ್ಟು ಸಣ್ಣ ಮೊತ್ತವನ್ನು ಪಾವತಿಸಲು ಮೂರು ವಾರ ಏಕೆ? ತಲಾ 40 ರಂತೆ ಎರಡು ವಾರಗಳಲ್ಲಿ 80 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಬಹುದಲ್ಲವೇ ಎಂದು ಹೇಳಿತು.

ಅದಕ್ಕೆ ಬಿಬಿಎಂಪಿ ಪರ ವಕೀಲರು, ಪಾಲಿಕೆಯ ಆರ್ಥಿಕ ಸ್ಥಿತಿಯ ನೋಡಿ ಮುಂದಡಿ ಇಡಬೇಕಾಗುತ್ತದೆ ಎಂದರು. ಆಗ, ಎಷ್ಟು ದಿನ ಅಂತ ಹೀಗೆ ಬಿಡಲು ಆಗುತ್ತದೆ. ಅಷ್ಟಕ್ಕೂ ಸಂಗ್ರಹವಾದ ಭಿಕ್ಷುಕರ ಸೆಸ್ ಹಣವನ್ನು ನೀವೆನು ಪಾಲಿಕೆ ಕಚೇರಿಯಲ್ಲಿ ಇಟ್ಟುಕೊಂಡಿರಲಿಲ್ಲ ಅಲ್ವಾ? ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುತ್ತೀರಿ. ಆ ಮೂಲಕ ಹಣವನ್ನು ಪಾಲಿಕೆ ‘ದುಡಿಸಿಕೊಂಡಿದೆ’ ಮತ್ತು ಆ ಹಣದಿಂದ ‘ಲಾಭ’ ಸಹ ಪಡೆದುಕೊಂಡಿರುತ್ತೀರಿ. ಹೀಗಿದ್ದಾಗ ತಕ್ಷಣ ಪಾವತಿಸಲು ಸಮಸ್ಯೆಯೇನು ಎಂದು ಪ್ರಶ್ನಿಸಿದ ನ್ಯಾಯಪೀಠ, ಬಾಕಿ 80 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಬಗ್ಗೆೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ, ಅದನ್ನು ಆಧರಿಸಿ ಮುಂದಿನ ನಿರ್ದೇಶನ ನೀಡಲಾಗುವುದು ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಇದೇ ವೇಳೆ, ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ರಾಜ್ಯದ ಉಳಿದ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ಬಾಕಿ ಬರಬೇಕಿದ್ದ 50 ಕೋಟಿ ರೂ. ಭಿಕ್ಷುಕರ ಸೆಸ್ ಪೈಕಿ 20 ಕೋಟಿ ರೂ. ವಸೂಲಿ ಮಾಡಲಾಗಿದೆ. ಉಳಿದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು. ಅದಕ್ಕೂ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು.

ಅರ್ಜಿದಾರರ ಪರ ವಕೀಲರ ಪುತ್ತಿಗೆ ರಮೇಶ್, ಭಿಕ್ಷುಕರ ಸೆಸ್‌ಗೆ ಸಂಬಂಧಿಸಿದಂತೆ ಪಾಲಿಕೆ ಹಿಂದಿನ ವಿಚಾರಣೆ ನೀಡಿದ್ದ ಅಂಕಿ-ಅಂಶಗಳಿಗೂ ಈಗ ಕೊಟ್ಟಿರುವ ಮಾಹಿತಿಗೂ ವ್ಯತ್ಯಾಸವಿದೆ ಎಂದರು. ಅದಕ್ಕೆ ನಿಮ್ಮ ಬಳಿ ಇರುವ ಸರಿಯಾದ ಮಾಹಿತಿಯೊಂದಿಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ, ಇದೇ ಅವಧಿಯಲ್ಲಿ ಬಿಬಿಎಂಪಿ ಅದಕ್ಕೆ ಆಕ್ಷೇಪಣೆ ಸಲ್ಲಿಸಲಿ ಎಂದು ನ್ಯಾಯಪೀಠ ಸೂಚನೆ ನೀಡಿತು.

ಇದನ್ನೂ ಓದಿ:ಮೈಸೂರು ವಿವಿ ಕುಲಪತಿ ಲೋಕನಾಥ್​ ನೇಮಕಾತಿ ರದ್ದುಪಡಿಸಿದ ಹೈಕೋರ್ಟ್

ABOUT THE AUTHOR

...view details