ಬೆಂಗಳೂರು: ಪ್ರತಿದಿನ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಹಾಗೂ ಕಂದಾಯ ಇಲಾಖೆಯು ಕಂದಾಯ ಪ್ರಕರಣಗಳ ವಿಚಾರಣೆಯ ದಿನಾಂಕ, ಆದೇಶ, ಕಾಸ್ಲಿಸ್ಟ್ (ಪ್ರಕರಣಗಳ ಪಟ್ಟಿ), ತೀರ್ಪುಗಳನ್ನು ವೆಬ್‌ಹೋಸ್ಟ್ ಮಾಡುತ್ತಿರುವ ರೀತಿಯಲ್ಲಿ ಬಿಬಿಎಂಪಿಯು ಇ-ಆಡಳಿತ ಇಲಾಖೆಯ ಜೊತೆಗೂಡಿ ವ್ಯವಸ್ಥೆ ರೂಪಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ಸದಾಶಿವನಗರದ ಎಂ.ಉಮಾದೇವಿ ಎಂಬವರು ಅರೆ ನ್ಯಾಯಿಕ ಪ್ರಾಧಿಕಾರ ಬಿಬಿಎಂಪಿಯ ಜಂಟಿ ಆಯುಕ್ತರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮಗೆ ಮಾಹಿತಿ ನೀಡದೇ ಆದೇಶ ಮಾಡಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋಂವಿದರಾಜ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರೆ ನ್ಯಾಯಿಕ ಪ್ರಾಧಿಕಾರಗಳ ಮುಂದೆ ನಡೆಯುವ ಪ್ರಕರಣಗಳ ಆದೇಶಗಳು, ದಿನನಿತ್ಯ ಆದೇಶಗಳು, ತೀರ್ಪುಗಳನ್ನು ಬಿಬಿಎಂಪಿ ಅಪ್ಲೋಡ್ ಮಾಡುತ್ತಿಲ್ಲ. ಇದಕ್ಕಾಗಿ, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಇ-ಕೋರ್ಟ್ಸ್ ಪ್ರಾಜೆಕ್ಟ್ ಮೂಲಕ ಹಾಗೆಯೇ ಕಂದಾಯ ಇಲಾಖೆಯು ರೆವಿನ್ಯೂ ಕೋರ್ಟ್ ಕೇಸಸ್ ಮ್ಯಾನೇಜ್ಮೆಂಟ್ ಸಿಸ್ಟಂ (rccms.karnataka.gov.in) ಮೂಲಕ ಎಲ್ಲಾ ಪ್ರಕರಣಗಳ ಕಾಸ್ಲಿಸ್ಟ್, ಪ್ರತಿ ಪ್ರಕರಣದಲ್ಲಿ ಪ್ರತಿದಿನ ಮಾಡಿದ ಆದೇಶಗಳನ್ನು ವೆಬ್‌ಹೋಸ್ಟ್ ಮಾಡುತ್ತಿವೆ. ಇದೇ ಮಾದರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜೊತೆಗೂಡಿ ವೆಬ್‌ಹೋಸ್ಟ್ ಮಾಡಲು ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿದೆ.