ಬೆಂಗಳೂರು : ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು 30 ದಿನಗಳ ಕಾಲ ಧಾರವಾಡದಲ್ಲಿರಲು ಅನುಮತಿ ನೀಡುವಂತೆ ಕೋರಿರುವ ಅರ್ಜಿ ಮತ್ತು ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ :ವಿನಯ್ ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆ ವಿಚಾರ: ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದ್ದೇನು?
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು (ಧಾರವಾಡ) ಪ್ರವೇಶ ನಿರ್ಬಂಧಿಸಿರುವವರು ಯಾರು? ಎಂದಿತು. ಆಗ ವಕೀಲರು, ಸುಪ್ರೀಂಕೋರ್ಟ್ ಎಂದು ತಿಳಿಸಿದರು. ಇದಕ್ಕೆ ಪೀಠವು ಸುಪ್ರೀಂಕೋರ್ಟ್ ತಾನೆ, ಅಲ್ಲಿಗೆ ಹೋಗಿ. ವಿಚಾರಣಾಧೀನ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ನಮಗಲ್ಲ (ಹೈಕೋರ್ಟ್). ಈ ಮಧ್ಯೆ, ನಾವೇನೂ ಮಾಡಲಾಗದು. ನೀವುಂಟು, ಸುಪ್ರೀಂ ಕೋರ್ಟ್ ಉಂಟು ಮತ್ತು ವಿಚಾರಣಾಧೀನ ನ್ಯಾಯಾಲಯ ಉಂಟು. ಸುಪ್ರೀಂಕೋರ್ಟ್ ಆದೇಶ ಮಾಡಿರುವುದರಿಂದ ನೀವು ಅಲ್ಲಿಯೇ ಪ್ರಶ್ನಿಸಬೇಕು ಎಂದು ಮೌಖಿಕವಾಗಿ ಹೇಳಿತು. ಅಲ್ಲದೇ, ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.