ಬೆಂಗಳೂರು :ಅಭಿವೃದ್ಧಿ ಯೋಜನೆಗಳಿಗಾಗಿ ನಗರದಲ್ಲಿ ಯಾವುದೇ ಮರವನ್ನು ಕತ್ತರಿಸಿ ತೆರವು ಮಾಡಲು ಅಥವಾ ಸ್ಥಳಾಂತರಿಸಲು ಅನುಮತಿ ನೀಡಿದರೆ ಆ ಕುರಿತ ಎಲ್ಲ ಮಾಹಿತಿಗಳನ್ನು ಪಾಲಿಕೆಯ ವೆಬ್ ಸೈಟ್ನಲ್ಲಿ ತಪ್ಪದೇ ಪ್ರಕಟಿಸಬೇಕು ಎಂದು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ.
ಮರ ತೆರವು ವಿವರ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ - BBPM Latest News
ಮರಗಳನ್ನು ತೆರವು ಮಾಡುವ ಕುರಿತಂತೆ ಎಲ್ಲಾ ವಿಷಯಗಳನ್ನು ಪಾಲಿಕೆ ವೆಬ್ ಸೈಟ್ನಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶಿಸಿ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಮರಗಳನ್ನು ಕತ್ತರಿಸುತ್ತಿರುವುದನ್ನು ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ದತ್ತಾತ್ರೇಯ ಟಿ. ದೇವರೆ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಮರಗಳನ್ನು ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಪಾಲಿಕೆ ಅಳವಡಿಸಿಕೊಳ್ಳಬೇಕು. ಮರಗಳನ್ನು ಕತ್ತರಿಸುವ ಅಥವಾ ತೆರವು ಮಾಡುವ ಪ್ರಕ್ರಿಯೆಗಳು ಅತ್ಯಂತ ಪಾರದರ್ಶಕವಾಗಿರಬೇಕು. ಹೀಗಾಗಿ ಮರಗಳನ್ನು ತೆರವು ಮಾಡುವ ಕುರಿತಂತೆ ಎಲ್ಲಾ ವಿಷಯಗಳನ್ನು ಪಾಲಿಕೆ ವೆಬ್ ಸೈಟ್ನಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶಿಸಿತು. ಇದೇ ವೇಳೆ ಮೆಟ್ರೋ ರೈಲು ಯೋಜನೆಗಾಗಿ ಮರಗಳನ್ನು ಕತ್ತರಿಸುವುದಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿತು.