ಬೆಂಗಳೂರು:ಪರಿಸರ ವಿಜ್ಞಾನಿ ಹಾಗೂ ಪರಿಸರವಾದಿ ಕೆಟಗರಿಯಡಿ ಸಿದ್ಧಾರ್ಥ್ ಗೋಯೆಂಕಾ ಸೇರಿದಂತೆ 10 ಮಂದಿಯನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ ಪರಿಸರ ಇಂಜಿನಿಯರ್ ಜಿ ಎಂ ಭೋಜರಾಜು ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ವನ್ಯಜೀವಿ ಮಂಡಳಿ, ಸದಸ್ಯರಾದ ಸಿದ್ಧಾರ್ಥ ಗೋಯೆಂಕಾ, ಬಿ. ಚೇತನ್, ಡಾ. ಎ. ಆರ್ ಸೋಮಶೇಖರ್ ಸೇರಿದಂತೆ ಮಂಡಳಿಯ ಎಲ್ಲ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದೆ.
ಸಿದ್ಧಾರ್ಥ ಗೋಯೆಂಕಾ, ಬಿ.ಚೇತನ್, ಡಾ.ಎ.ಆರ್ ಸೋಮಶೇಖರ್ ಸೇರಿ 10 ಮಂದಿಯನ್ನು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ ಪರಿಸರ ವಿಜ್ಞಾನಿ ಹಾಗೂ ಪರಿಸರವಾದಿ ಕೆಟಗರಿಯಡಿ ನಾಮ ನಿರ್ದೇಶನ ಮಾಡಲಾಗಿದೆ. ಇವರಿಗೆ ಮಂಡಳಿಯ ಸದಸ್ಯರಾಗಲು ಅರ್ಹತೆ ಇಲ್ಲವಾಗಿದೆ. ಮತ್ತೊಂದೆಡೆ, ವನ್ಯ ಜೀವಿ ಮಂಡಳಿಯು 2021ರ ಜ.19ರಂದು ಸಭೆ ನಡೆಸಿ, ‘ಗ್ರೇಟರ್ ಹೆಸರುಘಟ್ಟ ಮೀಸಲು ಸಂರಕ್ಷಣೆ’ ಘೋಷಣೆ ತಿರಿಸ್ಕರಿಸಿ ನಿರ್ಣಯ ಕೈಗೊಂಡಿದೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಂದಿನ ಸಭೆಗೆ ವಿಶೇಷ ಆಹ್ವಾನಿತರಾಗಿ ಯಲಹಂಕ ಶಾಸಕ ಎ. ಆರ್ ವಿಶ್ವನಾಥ್ ಅವರನ್ನು ಆಹ್ವಾನಿಸಲಾಗಿತ್ತು. ಇದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಅಧಿನಿಯಮಗಳು-2008ರ ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ. ಅಲ್ಲದೇ, 2021ರ ಜ.19ರಂದು ಮಂಡಳಿಯು ಕೈಗೊಂಡಿರುವ ನಿರ್ಣಯ ರದ್ದುಪಡಿಸಬೇಕು. ಮಂಡಳಿಯ ಸದಸ್ಯರಾಗಿ ಸಿದ್ಧಾರ್ಥ್ ಗೋಯೆಂಕಾ ಸೇರಿ ಇತರರನ್ನು ನಾಮ ನಿರ್ದೇಶನ ಮಾಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಓದಿ:'ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ರೆ ಶಿಸ್ತು ಕ್ರಮ'