ಬೆಂಗಳೂರು:ಲಾಕ್‌ಡೌನ್ ಪ್ರಯುಕ್ತ ರಾಜ್ಯದ ಎಲ್ಲಾ ಕೋರ್ಟ್‌ಗಳಿಗೆ ರಜೆ ನೀಡಿದ್ದು, ಬಾಕಿ ಇರುವ ವಿಚಾರಣಾ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಜೂನ್ 5ರವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.
ಕೊರೊನಾ ಎಫೆಕ್ಟ್ : ಮಧ್ಯಂತರ ಆದೇಶಗಳನ್ನು ವಿಸ್ತರಿಸಿದ ಹೈಕೋರ್ಟ್ - ಕೋರ್ಟ್‌ಗಳ ಮಧ್ಯಂತರ ಆದೇಶ
ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡಿದ್ದರಿಂದ ಇಲ್ಲಿನ ಎಲ್ಲಾ ನ್ಯಾಯಾಲಯಗಳು ಹೊರಡಿಸಿರುವ ಮಧ್ಯಂತರ ಆದೇಶ, ಜಾಮೀನು ಹಾಗೂ ಭೂ ಒತ್ತುವರಿ ತೆರವು ಆದೇಶಗಳನ್ನು ಜೂನ್ 5ರವರೆಗೆ ಹೈಕೋರ್ಟ್ ವಿಸ್ತರಿಸಿದೆ.
ಈ ಮೂಲಕ ಕಕ್ಷಿದಾರರ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದಂತೆ ನಿರ್ದೇಶಿಸಿದೆ. ನ್ಯಾಯಾಲಯಗಳಿಗೆ ರಜೆ ಇರುವುದರಿಂದ ಲಾಕ್‌ಡೌನ್ ಅವಧಿಯಲ್ಲಿ ಕೋರ್ಟ್‌ಗಳ ಮಧ್ಯಂತರ ಆದೇಶದ ಮೇರೆಗೆ ಯಾವುದೇ ತೆರವು, ಜಪ್ತಿ ಮಾಡದಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಅದರಂತೆ ನ್ಯಾಯಾಲಯಗಳು ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶಗಳ ಅನುಸಾರ ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಜರುಗಿಸುವಂತಿಲ್ಲ. ಕಟ್ಟಡಗಳ ತೆರವು ಅಥವಾ ವಶಕ್ಕೆ ತೆಗೆದುಕೊಳ್ಳುವಂತಿಲ್ಲ. ಬ್ಯಾಂಕ್ಗಳು ಸಾಲ ವಸೂಲಿ ಅಥವಾ ಜಪ್ತಿ ಮಾಡುವಂತಿಲ್ಲ. ಹಾಗೆಯೇ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಮಧ್ಯಂತರ ಆದೇಶಗಳು ಜೂನ್ 5ವರೆಗೆ ವಿಸ್ತರಿಸಲ್ಪಟ್ಟಿವೆ. ಈ ಆದೇಶ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೂ, ನ್ಯಾಯಮಂಡಳಿಗಳಿಗೂ ಅನ್ವಯಿಸಲಿದೆ.