ಕೊರೊನಾ ಎಫೆಕ್ಟ್: ಮಧ್ಯಂತರ ಆದೇಶಗಳನ್ನು ವಿಸ್ತರಿಸಿದ ಹೈಕೋರ್ಟ್ - ಬೆಂಗಳೂರು
ಜಿಲ್ಲಾ ನ್ಯಾಯಾಲಯ, ಸಿವಿಲ್ ಕೋರ್ಟ್, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಕೈಗಾರಿಕಾ ನ್ಯಾಯ ಮಂಡಳಿಗಳು ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಹೈಕೋರ್ಟ್ ಜುಲೈ 6ರವರೆಗೆ ವಿಸ್ತರಣೆ ಮಾಡಿದೆ.
![ಕೊರೊನಾ ಎಫೆಕ್ಟ್: ಮಧ್ಯಂತರ ಆದೇಶಗಳನ್ನು ವಿಸ್ತರಿಸಿದ ಹೈಕೋರ್ಟ್](https://etvbharatimages.akamaized.net/etvbharat/prod-images/768-512-7478038-890-7478038-1591279822466.jpg)
ಬೆಂಗಳೂರು: ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಜುಲೈ 6ರವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.
ಮೊಹಮ್ಮದ್ ಜಮೀಲ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಹೈಕೋರ್ಟ್, ಜಿಲ್ಲಾ ನ್ಯಾಯಾಲಯ, ಸಿವಿಲ್ ಕೋರ್ಟ್, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಕೈಗಾರಿಕಾ ನ್ಯಾಯ ಮಂಡಳಿಗಳು ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಜುಲೈ 6ರವರೆಗೆ ವಿಸ್ತರಣೆ ಮಾಡಿದೆ.
ಕೊರೊನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಕಕ್ಷಿದಾರರು ನ್ಯಾಯಾಲಯಗಳಿಗೆ ಹೋಗುವುದು ಕಷ್ಟವಾಗುತ್ತದೆ. ಹೀಗಾಗಿ ತೆರವು, ಜಪ್ತಿ ಸೇರಿದಂತೆ ಕಾನೂನಾತ್ಮಕ ಕ್ರಮ ಜರುಗಿಸಲು ನ್ಯಾಯಾಲಯಗಳು ನೀಡಿರುವ ಮಧ್ಯಂತರ ಆದೇಶಗಳಿಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿ ಮಧ್ಯಂತರ ಆದೇಶಗಳಿಗೆ ಜೂ. 6ರವರೆಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಮತ್ತೊಮ್ಮೆ ತಡೆಯಾಜ್ಞೆ ಆದೇಶವನ್ನು ಜುಲೈ 6ರವರೆಗೆ ವಿಸ್ತರಿಸಿದೆ.
ಅದರಂತೆ ಹೈಕೋರ್ಟ್ ಹಾಗೂ ಸಿವಿಲ್ ಕೋರ್ಟ್‌ಗಳು ಹೊರಡಿಸಿರುವ ಅಕ್ರಮ ಕಟ್ಟಡಗಳ ತೆರವು ಆದೇಶಗಳು ಜು. 6ರವರೆಗೆ ಅಮಾನತಿನಲ್ಲಿ ಇರಲಿವೆ. ಅಂತೆಯೇ ಕ್ರಿಮಿನಲ್ ಪ್ರಕರಣಗಳಲ್ಲಿ ಈಗಾಗಲೇ ನೀಡಿರುವ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಆದೇಶಗಳು ಮುಕ್ತಾಯಗೊಳ್ಳುವಂತಿದ್ದರೆ ಅವುಗಳೂ ಸಹ ಜುಲೈ 6ರವರೆಗೆ ಮುಂದುವರಿಯಲಿವೆ. ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಕೋರ್ಟ್‌ಗೆ ಬರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.