ಕರ್ನಾಟಕ

karnataka

ETV Bharat / state

ವಕೀಲ ಜಗದೀಶ್ ಗೆ 2 ಲಕ್ಷ ರೂ ದಂಡ : ಕ್ರಿಮಿನಲ್​ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್

ನ್ಯಾಯಾಲಯದಲ್ಲಿ ಗದ್ದಲವುಂಟು ಮಾಡಿದ್ದ ಕುರಿತು ಬೇಷರತ್ ಕ್ಷಮೆಯಾಚನೆ ಮಾಡಿದ ಹಿನ್ನೆಲೆ ವಕೀಲ ಕೆ.ಎನ್. ಜಗದೀಶ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್​ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್​ ಕೈಬಿಟ್ಟಿದ್ದು, ಪ್ರಕರಣ ಸಂಬಂಧ 2 ಲಕ್ಷ ದಂಡ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.

high-court-dropped-the-contempt-of-court-case-of-kn-jagadeesh
ವಕೀಲ ಜಗದೀಶ್ ಗೆ 2 ಲಕ್ಷ ದಂಡ : ಕ್ರಿಮಿನಲ್​ ನ್ಯಾಯಾಂಗ ನಿಂದನೆ ಪ್ರಕರಣ ಕೈ ಬಿಟ್ಟ ಹೈಕೋರ್ಟ್

By

Published : Nov 29, 2022, 3:22 PM IST

ಬೆಂಗಳೂರು : ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ನಗರದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಗದ್ದಲವುಂಟು ಮಾಡಿದ್ದ ಕುರಿತು ಬೇಷರತ್ ಕ್ಷಮೆಯಾಚನೆ ಮಾಡಿದ ಹಿನ್ನೆಲೆ ವಕೀಲ ಕೆ.ಎನ್. ಜಗದೀಶ್ ವಿರುದ್ಧ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ.

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಪಿ. ವರಾಲೆ ಅವರಿದ್ದ ವಿಭಾಗೀಯ ಪೀಠಕ್ಕೆ ಜಗದೀಶ್ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, ನ್ಯಾಯಾಲಯದ ವಿಚಾರಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಈ ರೀತಿ ನಡೆದುಕೊಳ್ಳುವುದಿಲ್ಲ ಎಂಬುದಾಗಿ ಕ್ಷಮಾಪಣಾ ಪತ್ರ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿತು.

2 ಲಕ್ಷ ರೂ. ದಂಡ :ನ್ಯಾಯಾಲಯದಲ್ಲಿ ಗದ್ದಲವುಂಟು ಮಾಡಿದ್ದಕ್ಕೆ ವಕೀಲ ಜಗದೀಶ್‌ಗೆ 2 ಲಕ್ಷ ರೂ ದಂಡ ವಿಧಿಸಿದ ನ್ಯಾಯಪೀಠ, ದಂಡದ ಮೊತ್ತದಲ್ಲಿ 1 ಲಕ್ಷ ರೂಪಾಯಿವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರ, 50 ಸಾವಿರ ರೂಪಾಯಿವನ್ನು ವಕೀಲರ ಸಂಘದ ಗ್ರಂಥಾಲಯ ಅಭಿವೃದ್ಧಿಗೆ ಮತ್ತು 50 ಸಾವಿರ ರೂ.ವನ್ನು ಹೈಕೋರ್ಟ್‌ನ ಗುಮಾಸ್ಥರ ಕ್ಷೇಮಾಭಿವೃದ್ಧಿ ಸಂಘಕ್ಕೆ ಮುಂದಿನ ಎರಡು ವಾರಗಳಲ್ಲಿ ಪಾವತಿಸಬೇಕು ಸೂಚನೆ ನೀಡಿತು. ಜತೆಗೆ, ಈ ಆದೇಶವನ್ನು ಪಾಲಿಸಿರುವ ಕುರಿತಂತೆ ಡಿಸೆಂಬರ್ 16 ರಂದು ನ್ಯಾಯಾಲಯಕ್ಕೆ ವಿವರಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ :ಪ್ರಕರಣವೊಂದರ ವಿಚಾರಣೆಗೆ ನಗರದ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲ ಜಗದೀಶ್ ನ್ಯಾಯಾಲಯ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದರು. ಅಲ್ಲದೆ, ನ್ಯಾಯಾಲಯದಲ್ಲಿ ಟೇಬಲ್ ಮೇಲೆ ಗುದ್ದಿ ಗದ್ದಲವುಂಟು ಮಾಡಿದ್ದರು. ಈ ಬಗ್ಗೆ ನ್ಯಾಯಾಧೀಶರು ಹಲವು ಬಾರಿ ಮನವಿ ಮಾಡಿದರೂ ಗಲಾಟೆ ಮುಂದುವರೆಸಿದ್ದರು. ಈ ಬಗ್ಗೆ ಜಗದೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಹೈಕೋರ್ಟ್‌ಗೆ ಪತ್ರದ ಮೂಲಕ ಮನವಿ ಮಾಡಿದ್ದರು.

ಈ ಸಂಬಂಧ ಹೈಕೋರ್ಟ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಇದೀಗ ದಂಡ ವಿಧಿಸಿ ಪ್ರಕರಣವನ್ನು ಕೈಬಿಟ್ಟಿದೆ.

ಇದನ್ನೂ ಓದಿ :ಬೆಂಗಳೂರು ನಗರ ಡಿಸಿ, ಬಿಬಿಎಂಪಿ ವಿಶೇಷ ಆಯುಕ್ತ ಹುದ್ದೆಗಳಿಗೆ ಅಧಿಕಾರಿಗಳ ನೇಮಕ

ABOUT THE AUTHOR

...view details