ಕರ್ನಾಟಕ

karnataka

ETV Bharat / state

ಮಂಗಳೂರು ಗಲಭೆ ಪ್ರಕರಣದ ಆರೋಪಿಗಳಿಗೆ ಜಾಮೀನು: ಪೊಲೀಸರ ನಡೆಗೆ ಹೈಕೋರ್ಟ್ ಅಸಮಾಧಾನ - ಮಂಗಳೂರು ಗಲಭೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರ ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಗಲಭೆ ಸೃಷ್ಟಿಸಿದ ಆರೋಪದ ಮೇಲೆ ಬಂಧಿತರಾಗಿದ್ದ 21 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

high-court
high-court

By

Published : Feb 19, 2020, 11:14 PM IST

Updated : Feb 20, 2020, 5:03 AM IST

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರ ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಗಲಭೆ ಸೃಷ್ಟಿಸಿದ ಆರೋಪದ ಮೇಲೆ ಬಂಧಿತರಾಗಿದ್ದ 21 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಆಶಿಕ್, ಮಹಮ್ಮದ್ ಸುಹಾಲ್ ಸೇರಿದಂತೆ 21 ಮಂದಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ, ಅರ್ಜಿದಾರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿಗಳು ತಲಾ ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು ಹಾಗೂ ಅದೇ ಮೊತ್ತದ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಅಗತ್ಯವಿರುವಾಗೆಲ್ಲಾ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಸಾಕ್ಷಿಗಳನ್ನು ಬೆದರಿಸುವ ಅಥವಾ ಆಮಿಷಕ್ಕೊಳಪಡಿಸುವ ಕೆಲಸ ಮಾಡಬಾರದು. ಈ ಮಾದರಿಯ ಅಪರಾಧಗಳಲ್ಲಿ ಭಾಗಿಯಾಗಬಾರದು. ಪೂರ್ವಾನಮತಿ ಇಲ್ಲದೇ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ಜಾಮೀನು ಮಂಜೂರಾತಿಗೆ ಹೈಕೋರ್ಟ್ ಷರತ್ತುಗಳನ್ನು ವಿಧಿಸಿದೆ.

ಅರ್ಜಿದಾರರು ಮಾರಾಕಸ್ತ್ರಗಳೊಂದಿಗೆ ಸ್ಥಳದಲ್ಲಿದ್ದರು ಎಂಬುದನ್ನು ಸಾಬೀತುಪಡಿಸುವುದಕ್ಕೆ ಪೂರಕ ದಾಖಲೆಗಳನ್ನು ಸರ್ಕಾರಿ ಅಭಿಯೋಜಕರು ಒದಗಿಸಿಲ್ಲ. ತನಿಖಾಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳಿಗೆ ನಿರ್ದಿಷ್ಟ ಸಾಕ್ಷ್ಯವಿಲ್ಲ. ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸುವುದೇ ಕೂಟ ಸೇರುವುದರ ಸಾಮಾನ್ಯ ಉದ್ದೇಶ ಹೊರತು ಅದೊಂದು ಅಕ್ರಮ ಕೂಟ ಎಂದು ಹೇಳಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, 1500ರಿಂದ 2000ರವರೆಗೆ ಮುಸ್ಲಿಂ ಯುವಕರು ಅಕ್ರಮ ಕೂಟ ಸೇರಿದ್ದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮತ್ತು ಸಾರ್ವಜನಿಕ ಆಸ್ತಿ ನಷ್ಟ ಮಾಡಲು ಸಂಚು ರೂಪಿಸಿದ್ದರು. ಅವರು ಕೋಲು, ಸೋಡಾ ಬಾಟೆಲ್ ಮತ್ತು ಕಲ್ಲುಗಳನ್ನು ಕೈಯಲ್ಲಿ ಹಿಡಿದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ಕೊರ್ಟ್‌ಗೆ ಒದಗಿಸಿರುವ ಫೋಟೋ ಹಾಗೂ ಸಿಸಿಟಿವಿ ದೃಶ್ಯಗಳ ಪ್ರಕಾರ ಒಬ್ಬ ಯುವಕ ಮಾತ್ರ ಬಾಟೆಲ್ ಹಿಡಿದಿದ್ದಾನೆ. ಬೇರೆ ಯಾರು ಸಹ ಮಾರಕಾಸ್ತ್ರಗಳನ್ನು ಹಿಡಿದಿಲ್ಲ. ಆದರೆ, ಅರ್ಜಿದಾರರು ಸಲ್ಲಿಸುರುವ ಫೋಟೋಗಳಲ್ಲಿ ಪೊಲೀಸರೇ ಜನರ ಗುಂಪಿನ ಮೇಲೆ ಕಲ್ಲು ತೂರುತ್ತಿರುವುದು ಕಂಡುಬಂದಿದೆ. ಇದಲ್ಲದೇ, ಪೊಲೀಸರ ಗೋಲಿಬಾರ್‌ನಿಂದ ಸಾವನ್ನಪ್ಪಿದವರ ಅಲಂಬಿತರು, ಪೊಲೀಸರ ವಿರುದ್ಧ ನೀಡಿದ ದೂರು ಹಾಗೂ ಹಿಂಬರಹದ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಪೊಲೀಸರ ವರ್ತನೆಯು ಅಪರಾಧ ಎಂದು ತಿಳಿದುಬಂದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ಪೊಲೀಸರು ತಮ್ಮ ತಪ್ಪುಗಳನ್ನು ಮುಚ್ಚಿಡುವ ನಿಟ್ಟಿನಲ್ಲಿ ಅಮಾಯಕರನ್ನು ಉದ್ದೇಶಪೂರ್ವಕವಾಗಿಯೇ ಪ್ರಕರಣದಲ್ಲಿ ಸಿಲುಕಿಸಿದಂತೆ ಕಾಣುತ್ತಿದೆ. ಪೊಲೀಸರ ಗೋಲಿಬಾರ್‌ನಿಂದ ಸಾವನ್ನಪ್ಪಿದ ವ್ಯಕ್ತಿಗಳ ವಿರುದ್ಧವೇ ಐಪಿಸಿ ಸೆಕ್ಷನ್ 307 (ಕೊಲೆಯತ್ನ) ಆರೋಪದಡಿ ಎಫ್‌ಐಆರ್ ದಾಖಲಿಸಿರುವುದು ಪೊಲೀಸರ ಅತಿರೇಕದ ವರ್ತನೆಗೆ ಸಾಕ್ಷಿಯಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಟೀಕಿಸಿದೆ.

Last Updated : Feb 20, 2020, 5:03 AM IST

ABOUT THE AUTHOR

...view details