ಕರ್ನಾಟಕ

karnataka

ETV Bharat / state

ಕೋವಿಡ್-19.. ಮೇಲ್ವಿಚಾರಣಾ ಸಮಿತಿ ಕಾರ್ಯ ವೈಖರಿಗೆ ಹೈಕೋರ್ಟ್ ಅಸಮಾಧಾನ - Covid supervisory committee

ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋವಿಡ್ ಆಸ್ಪತ್ರೆಗಳಿವೆ‌. ಇಲ್ಲಿನ ಸಮಿತಿಯೇ ಕೆಲಸ ಮಾಡಿಲ್ಲವೆಂದ್ರೆ ಇತರೆ ಜಿಲ್ಲೆಗಳ ಪರಿಸ್ಥಿತಿ ಹೇಗೆ? ಸರ್ಕಾರದ ವರದಿಯಲ್ಲಿ ಬೆಂಗಳೂರು ಸಮಿತಿ ನಿರ್ವಹಿಸಿದ ಕಾರ್ಯ ಚಟುವಟಿಕೆಗಳ ಬಗ್ಗೆ ಒಂದೇ ಒಂದು ಪದವೂ ಇಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿತು..

High Court dissatisfaction
ಕೋವಿಡ್ ಮೇಲ್ವಿಚಾರಣಾ ಸಮಿತಿ ಕಾರ್ಯ ವೈಖರಿಗೆ ಹೈಕೋರ್ಟ್ ಅಸಮಾಧಾನ

By

Published : Sep 30, 2020, 2:51 PM IST

ಬೆಂಗಳೂರು :ನಗರದಲ್ಲಿ‌ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಅಗತ್ಯ ಸಲಹೆ ನೀಡಲು ರೂಪಿಸಿರುವ ಮೇಲ್ವಿಚಾರಣಾ ಸಮಿತಿಯ ಕಾರ್ಯ ವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ವಿಚಾರವಾಗಿ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ‌ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಆದರೆ, ವರದಿಯಲ್ಲಿ ಬೆಂಗಳೂರು ನಗರದ ಮೇಲ್ವಿಚಾರಣಾ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತ ಯಾವುದೇ ಮಾಹಿತಿ‌ ಇರಲಿಲ್ಲ.

ಈ ಹಿನ್ನೆಲೆ ನಗರದಲ್ಲಿ ಮೇಲ್ವಿಚಾರಣಾ ಸಮಿತಿಯು ಸೂಕ್ತ ರೀತಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಪ್ರಶ್ನಿಸಿದ ಪೀಠ, ಅದರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿರುವ ನಗರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ನಗರದಲ್ಲಿ ದಿನಕ್ಕೆ 4 ಸಾವಿರದವರೆಗೂ ಹೊಸ ಪ್ರಕರಣ ಪತ್ತೆಯಾಗುತ್ತಿವೆ. ಇಂತಹ ಪರಿಸ್ಥಿತಿ ಇರುವಾಗ ಮೇಲ್ವಿಚಾರಣಾ ಸಮಿತಿ ‌ಕೆಲಸ ಮಾಡದೇ ಇರುವುದು ಎಷ್ಟು ಸರಿ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು‌.

ಅಲ್ಲದೆ, ವೈದ್ಯರು ಹಾಗೂ ಸಿಬ್ಬಂದಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ಕಳೆದ ಆರು ತಿಂಗಳಿಂದ ಅವಿರತ ಶ್ರಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲವಾದ್ರೆ ಅವರು ಹೇಗೆ ಚಿಕಿತ್ಸೆ ಕಲ್ಪಿಸಲು ಸಾಧ್ಯ? ಮೇಲ್ವಿಚಾರಣಾ ಸಮಿತಿ ವೈದ್ಯರು ಹೇಗೆ ಚಿಕಿತ್ಸೆ ಕೊಡುತ್ತಿದ್ದಾರೆ ಎಂದು ಪರಿಶೀಲಿಸುವ ಅಗತ್ಯವಿಲ್ಲ. ಬದಲಿಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಯಾವೆಲ್ಲಾ ಸೌಲಭ್ಯ ಇದೆ ಎಂಬುದನ್ನು ಪರಿಶೀಲಿಸಬೇಕು.

ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋವಿಡ್ ಆಸ್ಪತ್ರೆಗಳಿವೆ‌. ಇಲ್ಲಿನ ಸಮಿತಿಯೇ ಕೆಲಸ ಮಾಡಿಲ್ಲವೆಂದ್ರೆ ಇತರೆ ಜಿಲ್ಲೆಗಳ ಪರಿಸ್ಥಿತಿ ಹೇಗೆ? ಸರ್ಕಾರದ ವರದಿಯಲ್ಲಿ ಬೆಂಗಳೂರು ಸಮಿತಿ ನಿರ್ವಹಿಸಿದ ಕಾರ್ಯ ಚಟುವಟಿಕೆಗಳ ಬಗ್ಗೆ ಒಂದೇ ಒಂದು ಪದವೂ ಇಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿತು.

ಅಲ್ಲದೇ,‌‌‌ ನಗರ ಮೇಲ್ವಿಚಾರಣಾ ಸಮಿತಿ ಕೂಡಲೇ ತನ್ನ ಕಾರ್ಯಗಳನ್ನು ನಿರ್ವಹಿಸಲು‌ ಮುಂದಾಗಬೇಕು. ಮುಂದಿನ ವಿಚಾರಣೆ ವೇಳೆ ಸಮಗ್ರ ವರದಿ ಸಲ್ಲಿಸಬೇಕು. ಕೋವಿಡ್ ಆಸ್ಪತ್ರೆಯಲ್ಲಿನ ರೋಗಿಗಳಿಗೆ ದೂರು ನೀಡಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಹೆಲ್ಪ್ ಲೈನ್ ರೂಪಿಸಬೇಕು. ಕೋವಿಡ್ ಆಸ್ಪತ್ರೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details