ಬೆಂಗಳೂರು: ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಕುರಿತಂತೆ ಕೋರ್ಟ್ ಆದೇಶಗಳನ್ನು ಪಾಲಿಸದ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ನೆಪಗಳನ್ನು ಬಿಟ್ಟು ಕೆಲಸ ಮಾಡಿ. ಈ ಕುರಿತಂತೆ ಆಗಸ್ಟ್ 10 ರೊಳಗೆ ವರದಿ ನೀಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿದೆ.
ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ಕುರಿತಂತೆ ಸುಪ್ರೀಂಕೋರ್ಟ್ 2009ರಲ್ಲಿ ನೀಡಿರುವ ತೀರ್ಪು ಜಾರಿಗೊಳಿಸುವ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಕೋರ್ಟ್ ಆದೇಶದ ಅನುಪಾಲನಾ ವರದಿ ಸಲ್ಲಿಸದ ಸರ್ಕಾರದ ನಡೆಗೆ ಪೀಠ ಬೇಸರ ವ್ಯಕ್ತಪಡಿಸಿತು. ದಶಕದ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಹಾಗೂ ಆ ಬಳಿಕ ಹೈಕೋರ್ಟ್ ನೀಡಿರುವ ಆದೇಶಗಳ ಪಾಲನೆ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಏಕೆ ಎಂದು ಖಾರವಾಗಿ ಪ್ರಶ್ನಿಸಿತು. ಅಲ್ಲದೆ, ಆಗಸ್ಟ್ 10ರೊಳಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಂಎಪಿ ಆಯುಕ್ತರು ನ್ಯಾಯಾಲಯದ ಆದೇಶ ಪಾಲನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.
ಇನ್ನು ಇದೇ ವಿಚಾರವಾಗಿ ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಕುರಿತು ಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಪಾಲಿಕೆ ಪರ ವಕೀಲರು, ಬಹುತೇಕ ಅಧಿಕಾರಿಗಳು ಕೋವಿಡ್ ಕರ್ತವ್ಯದಲ್ಲಿದ್ದಾರೆ. ಹೀಗಾಗಿ, ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರವು ಮಾಡಲು ಸಾಧ್ಯವಾಗಿಲ್ಲ, ಈವರೆಗೆ ಮೂರು ಕಟ್ಟಡಗಳನ್ನು ತೆರವು ಮಾಡಲಾಗಿದೆ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ನಗರದಲ್ಲಿ 1890ಕ್ಕೂ ಅಧಿಕ ಅನಧಿಕೃತ ಧಾರ್ಮಿಕ ಕಟ್ಟಡಗಳಿದ್ದು, ಅವುಗಳಲ್ಲಿ 105 ಸ್ಥಳಾಂತರ ಮಾಡಬೇಕು, ಉಳಿದ ಕಟ್ಟಡಗಳನ್ನು ತೆರವು ಮಾಡಬೇಕು ಎಂದು ಎಂದು 2021ರ ಫೆಬ್ರವರಿಯಲ್ಲಿ ಪಾಲಿಕೆಯೇ ಹೇಳಿತ್ತು. ಆದರೆ ಈವರೆಗೆ ಕೇವಲ ಮೂರು ಕಟ್ಟಡ ತೆರವುಗೊಳಿಸಲಾಗಿದೆ ಎಂದರೆ ಹೇಗೆ? ಇದಕ್ಕೆ ವಿವರಣೆ ನೀಡಲು ಪಾಲಿಕೆ ಆಯುಕ್ತರನ್ನೇ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.