ಕರ್ನಾಟಕ

karnataka

ETV Bharat / state

ಜಾರಕಿಹೊಳಿ ಸಿಡಿ ಕೇಸ್ : ಎಸ್ಐಟಿ ಮುಖ್ಯಸ್ಥರ ಗೈರಿನಲ್ಲಿ ತನಿಖೆಗೆ ಹೈಕೋರ್ಟ್ ಅಸಮಾಧಾನ - High Court dissatisfaction about investigation of Jarakiholi CD Case

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿಯಿಂದಾಗಿ ತನಿಖೆ ದುರ್ಬಲವಾಗಿದೆ ಎಂಬ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಸ್‌ಐಟಿ ಪ್ರಕರಣವನ್ನು ಯಾವ ರೀತಿ ತನಿಖೆ ಮಾಡಿದೆ ಎಂಬುದು ಬೇರೆ ಮಾತು. ಆದರೆ, ಎಸ್ಐಟಿ ಮುಖ್ಯಸ್ಥರು ಮೇ 1ರಿಂದ ರಜೆಯಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತನಿಖೆ ನಡೆಸಿದ್ದು ಹೇಗೆ?. ಅವರು ರಜೆಯಲ್ಲಿದ್ದರೆ ಮತ್ತೊಬ್ಬ ಅಧಿಕಾರಿಗೆ ಹೊಣೆ ವಹಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿತು..

high-court
ಹೈಕೋರ್ಟ್

By

Published : Jul 27, 2021, 9:12 PM IST

ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳದ(ಎಸ್ಐಟಿ) ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಹೊಣೆಯನ್ನು ಮತ್ತೋರ್ವ ಅಧಿಕಾರಿಗೆ ವಹಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದೆ. ಇದೇ ವೇಳೆ ಎಸ್ಐಟಿ ರಚಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಪ್ರಕರಣದ ಯುವತಿ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಎಸ್ಐಟಿ ತನಿಖೆ ಆರಂಭವಾದಾಗಿನಿಂದ ಅದರ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿದ್ದಾರೆ. ಇದೀಗ ಎಸ್ಐಟಿ ತನಿಖೆ ಅಂತಿಮಗೊಂಡಿದ್ದು, ಅದರ ವಿವರ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಅದರಲ್ಲಿ ತನಿಖಾಧಿಕಾರಿಗಳು ಯುವತಿಯ ದೂರು ಸರಿಯಲ್ಲ ಎಂಬ ನಿಲುವಿಗೆ ಬಂದಿರುವುದಾಗಿ ಹೇಳಲಾಗಿದೆ. ಇದರ ಅರ್ಥ ಎಸ್ಐಟಿ ತನಿಖೆ ಸರಿಯಿಲ್ಲ ಎಂಬುದನ್ನಷ್ಟೇ ಸೂಚಿಸುತ್ತದೆ ಎಂದರು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿಯಿಂದಾಗಿ ತನಿಖೆ ದುರ್ಬಲವಾಗಿದೆ ಎಂಬ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಸ್‌ಐಟಿ ಪ್ರಕರಣವನ್ನು ಯಾವ ರೀತಿ ತನಿಖೆ ಮಾಡಿದೆ ಎಂಬುದು ಬೇರೆ ಮಾತು. ಆದರೆ, ಎಸ್ಐಟಿ ಮುಖ್ಯಸ್ಥರು ಮೇ 1ರಿಂದ ರಜೆಯಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತನಿಖೆ ನಡೆಸಿದ್ದು ಹೇಗೆ?. ಅವರು ರಜೆಯಲ್ಲಿದ್ದರೆ ಮತ್ತೊಬ್ಬ ಅಧಿಕಾರಿಗೆ ಹೊಣೆ ವಹಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿತು.

ಅಲ್ಲದೇ, ಈ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ವಾರದ ಒಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು. ಇದೇ ವೇಳೆ ರಮೇಶ್ ಜಾರಕಿಹೊಳಿ ಪ್ರತಿವಾದಿಯಾಗಿರುವ ಎಲ್ಲ ಅರ್ಜಿಗಳಿಗೂ ಆಗಸ್ಟ್ 3ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಹಿರಿಯ ವಕೀಲ ಸಿ ವಿ ನಾಗೇಶ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಜಾರಕಿಹೊಳಿ ಪರ ಹಿರಿಯ ವಕೀಲ ನಾಗೇಶ್‌ ವಾದಿಸಿ, ದೂರು ನೀಡಿದ ಯುವತಿಯ ಆರೋಪದಲ್ಲಿ ಹುರುಳಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದರೆ ಅದರಲ್ಲಿ ದುರುದ್ದೇಶವೇನಿದೆ ಎಂದರು. ಇದಕ್ಕೆ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಇದು ದುರುದ್ದೇಶದ ಕ್ರಮವಲ್ಲದೆ ಮತ್ತೇನಲ್ಲ ಎಂದರು.

ಮಧ್ಯ ಪ್ರವೇಶಿಸಿದ ಪೀಠ, ಮೊದಲಿಗೆ ಎಸ್‌ಐಟಿಯ ರಚನೆಯ ಸಿಂಧುತ್ವ ಹಾಗೂ ತನಿಖೆ ಸರಿಯಾಗಿ ನಡೆದಿದೆಯೇ ಎಂಬುದನ್ನು ನ್ಯಾಯಾಲಯ ತನ್ನ ವಿವೇಚನಾಧಿಕಾರ ಬಳಸಿ ಪರಿಶೀಲಿಸಲಿದೆ ಎಂದಿತು. ಇನ್ನು, ತನಿಖಾ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ಕ್ರಮವನ್ನು ಖಂಡಿಸಿದ ಪೀಠ, ತನಿಖಾ ಹಂತದಲ್ಲಿ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡದಂತೆ ಜುಲೈ 18ರಂದೇ ಆದೇಶಿಸಲಾಗಿದೆ. ಹೀಗಾಗಿ, ಪತ್ರಿಕೆ ವರದಿ ಸಮೇತ ಆಕ್ಷೇಪಣೆ ಸಲ್ಲಿಸಿ ಎಂದು ಯುವತಿ ಪರ ವಕೀಲರಿಗೆ ಸೂಚಿಸಿತು.

ಓದಿ:ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ

For All Latest Updates

ABOUT THE AUTHOR

...view details