ಬೆಂಗಳೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಮುಷ್ಕರ ನಿಗದಿಪಡಿಸಿರುವ ದಿನಾಂಕ ಮುಗಿದಿರುವುದರಿಂದ ಅರ್ಜಿ ವಿಚಾರಣೆಗೆ ಮಾನ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಮುಷ್ಕರ ನಡೆಸದಂತೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಗೆ ನಿರ್ದೇಶಿಸುವಂತೆ ಕೋರಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆ ಗ್ರಾಮದ ಎಚ್ಎಂ ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, ಮುಷ್ಕರ ಸಂಬಂಧ ಸಾರಿಗೆ ನೌಕರರ ಸಂಘಗಳು ಮತ್ತು ಕಾರ್ಮಿಕ ಇಲಾಖೆಯೊಂದಿಗೆ ನಡೆದ ಎರಡನೇ ಸಂಧಾನ ಸಭೆ ವಿಫಲವಾಗಿದೆ.
ಈ ಸಂಬಂಧ ಇಂದು (ಗುರುವಾರ) ಮಧ್ಯಾಹ್ನ ಕಾರ್ಮಿಕ ಇಲಾಖೆ ಆಯುಕ್ತರು ತಿಳಿಸಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಸಭೆಯ ನಿರ್ಧಾರಗಳ ಕುರಿತ ವರದಿಯನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ ನ್ಯಾಯಪೀಠ, ಅರ್ಜಿಯಲ್ಲಿ ವಿಚಾರಣೆಗೆ ಪರಿಗಣಿಸಬಹುದಾದ ಯಾವುದೇ ಅಂಶಗಳು ಉಳಿದಿಲ್ಲ ಎಂದು ಅಭಿಪ್ರಾಯಪಟ್ಟು ಪಿಐಎಲ್ ಇತ್ಯರ್ಥಪಡಿಸಿತು.
ಇದನ್ನೂ ಓದಿ:ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್