ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತವರ ಸಂಬಂಧಿಗಳಾದ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಸಾವಿತ್ರಮ್ಮ ವಿರುದ್ಧ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿನ ಸರ್ಕಾರದ ಭೂಮಿ ಕಬಳಿಕೆ ಆರೋಪ ಸಂಬಂಧ ಕಂದಾಯ ಇಲಾಖೆಯ ಕಾರ್ಯದರ್ಶಿ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರಿ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಅನುಷ್ಠಾನಗೊಳಿಸುವಂತೆ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಈ ಆದೇಶವನ್ನು ಅನುಷ್ಠಾನ ಮಾಡದ ಕ್ರಮವನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ಕೆ.ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಕಂದಾಯ ಇಲಾಖೆ ವರದಿಗೆ ಅಸಮಾಧಾನ ವ್ಯಕ್ತಪಡಿಸಿತು.
ಮತ್ತೆ ವರದಿ ಸಲ್ಲಿಸಿ:ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿರುವ ಸರ್ವೆ ನಂಬರ್‌ಗಳ ಕುರಿತ ತಹಶೀಲ್ದಾರ್ ರಿಂದ ಹೊರಡಿಸಿರುವ ತೆರವು ನೋಟಿಸ್, ಸರ್ಕಾರದ ಭೂಮಿ ಒತ್ತುವರಿ ಮಾಡಿಕೊಂಡಿರುವುದರ ಕುರಿತಾದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಮಾಡಿರುವ ಆದೇಶ, ಉಪವಿಭಾಗಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿರುವ ಜಿಲ್ಲಾಧಿಕಾರಿಯ ಆದೇಶ, ಗೋಮಾಳ ಒತ್ತುವರಿ ತೆರವಿನ ಬಳಿಕ ಮಹಜರ್ ನಡೆಸಿ, ಅದನ್ನು ವಶಕ್ಕೆ ಪಡೆದಿರುವುದು ಮತ್ತು ಅದನ್ನು ವಶಕ್ಕೆ ಪಡೆದಿರುವ ವರದಿಗಳು, 14 ಎಕರೆ 4 ಗುಂಟೆ ಭೂಮಿಯನ್ನು 8 ಎಕರೆ 30 ಗುಂಟೆಗೆ ಇಳಿಸಿರುವ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.