ಬೆಂಗಳೂರು : ಅಧ್ಯಯನ ನಡೆಸದೆ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಸೇವೆ (ಶಕ್ತಿ ಯೋಜನೆ)ಯನ್ನು ಪ್ರಶ್ನಿಸಿದ್ದ ಕಾನೂನು ವಿದ್ಯಾರ್ಥಿ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದ ವಿವಿಧ ಕಾನೂನು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ವಿನಿ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಶಿಕಾ ಸರವಣನ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಹಿಂಪಡೆಯಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ, ಈ ಶಕ್ತಿ ಯೋಜನೆ ಜಾರಿಗೂ ಮುನ್ನ ಸಂಚಾರ ವ್ಯವಸ್ಥೆ ಸುಗಮವಾಗಿತ್ತೇ?. ಈ ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ?. ಯಾವ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ?. ಸಾರ್ವಜನಿಕ ಬಸ್‌ಗಳಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮ ಜಾರಿಯಾಗಿದೆಯೇ? ಎಂದು ನ್ಯಾಯಪೀಠ ವಿವರಣೆ ಕೇಳಿತು.
ಅಷ್ಟೇ ಅಲ್ಲದೆ, ಅರ್ಜಿಗೆ ಮೊದಲು ಸಾರಿಗೆ ನಿಯಮಗಳ ಕುರಿತು ಯಾವ ಕಾರಣಕ್ಕಾಗಿ ಅಧ್ಯಯನ ನಡೆಸಿಲ್ಲ. ಅಲ್ಲದೆ, ದುರ್ಬಲ ವರ್ಗಗಳಿಗೆ ಮಾತ್ರವೇ ಉಚಿತ ಪ್ರಯಾಣ ನೀಡಲಾಗಿದೆ. ಯೋಜನೆಯನ್ನು ಪ್ರಶ್ನಿಸುತ್ತಿದ್ದೀರಿ ಸರಿ, ವಾಹನ ದಟ್ಟಣೆಗೆ ಪರಿಹಾರ ಕೋರಿದ್ದೀರಾ? ಎಂದು ಪ್ರಶ್ನಿಸಿತು. ಅಲ್ಲದೆ, ಮುಂಬೈ ಲೋಕಲ್ ರೈಲುಗಳ ದಟ್ಟಣೆ ಅರಿವಿದೆಯೇ ಎಂದು ಪ್ರಶ್ನೆ ಮಾಡಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ಸೂಕ್ತ ವಿವರಣೆ ನೀಡಲಾಗಿಲ್ಲ. ಜತೆಗೆ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಇದಕ್ಕೆ ನ್ಯಾಯಪೀಠ ಅನುಮತಿ ನೀಡಿತು.
ಪ್ರಕರಣದ ಹಿನ್ನೆಲೆ ಏನು ? : ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ಮಹಾತ್ವಾಕಾಂಕ್ಷೆಯಿಂದ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ ಯೋಜನೆ’ಯು ಅವ್ಯವಸ್ಥೆಯಿಂದ ಕೂಡಿದ್ದು, ಮಕ್ಕಳು-ಹಿರಿಯ ನಾಗರಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಹಾಗೂ ರಾಜ್ಯದ ಆರ್ಥಿಕತೆಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ, ರಾಜ್ಯದ ವಿವಿಧ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ವಿನಿ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಶಿಕಾ ಸರವಣನ್ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಸೇರಿದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದೆ. ಆದರೆ, ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಇದರಿಂದ ಅವ್ಯವಸ್ಥೆ ಹಾಗೂ ಗದ್ದಲ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣಿಕರು ಸಹ ಅಶಿಸ್ತಿನ ನಡವಳಿಕೆ ತೋರುತ್ತಿದ್ದಾರೆ. ಬಸ್‌ಗಳಲ್ಲಿ ಸೀಟಿಗಾಗಿ ಗಲಾಟೆ, ಹೊಡೆದಾಟ ನಡೆದು ಅಹಿತಕರ ಘಟನೆಗಳು ನಡೆಯುತ್ತಿವೆ. ಹಿರಿಯ ನಾಗರಿಕರು, ಮಕ್ಕಳು ಬಸ್‌ಗಳಲ್ಲಿ ಹತ್ತಲು ಆಗುತ್ತಿಲ್ಲ. ಇದರಿಂದ ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ. ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್‌ಗಳು ಯುದ್ಧ ಭೂಮಿ, ಮೀನು ಮಾರುಕಟ್ಟೆ ಆಗಿವೆ. ಇದರಿಂದ ಉಚಿತ ಪ್ರಯಾಣವು ಮಹಿಳೆಯರಿಗೆ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿ ಉಂಟು ಮಾಡುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
ಅಲ್ಲದೆ, ಶಕ್ತಿ ಯೋಜನೆ ಜಾರಿಯಾದ ದಿನದಿಂದ ಸರ್ಕಾರಿ ಬಸ್‌ಗಳಲ್ಲಿ ಮೂರು ಕೋಟಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದರಿಂದ ವಾರಕ್ಕೆ 100 ಕೋಟಿ ರೂ. ತೆರಿಗೆದಾರರ ಹಣ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಯೋಜನೆಗೆ ವಾರ್ಷಿಕ 3,200 ರಿಂದ 3,400 ಕೋಟಿ ರೂ. ವೆಚ್ಚವಾಗಬಹುದು. ಆದ್ದರಿಂದ ಬಸ್ ಹತ್ತುವಾಗ ಸರತಿ ಸಾಲು ವ್ಯವಸ್ಥೆ ಮಾಡಬೇಕು. ಕಿಟಕಿ ಮತ್ತು ಚಾಲಕರ ಸೀಟುಗಳ ಮೂಲಕ ಬಸ್‌ಗಳನ್ನು ಹತ್ತುವುದನ್ನು ತಡೆಯಬೇಕು. ಶಾಲಾ ಮಕ್ಕಳು ಹಿರಿಯ ನಾಗರಿಕರಿಗೆ ಬಸ್ ಹತ್ತಿ-ಇಳಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಹಾಗೆಯೇ, ಟಿಕೆಟ್ ಖರೀದಿಸಿದವರಿಗೆ ಶೇ. 50 ರಷ್ಟು ಸೀಟುಗಳಿಗೆ ಮೀಸಲಿಡಬೇಕು, ಶಾಲಾ ಮಕ್ಕಳಿಗೆ ವಿಶೇಷ ಬಸ್‌ಗಳನ್ನು ಜಾರಿಗೆ ತರಬೇಕು. ದೂರದ ಊರುಗಳಿಗೆ ತೆರಳುವ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಹತ್ತಲು ಮೊದಲು ಅವಕಾಶ ಮಾಡಿಕೊಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣಿಸುವುದನ್ನು ನಿಷೇಧಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಇದನ್ನೂ ಓದಿ:ಡಿ. ಕೆ. ಶಿವಕುಮಾರ್ ಟಿಪ್ಪಣಿ ಆಧರಿಸಿ ವರ್ಗಾವಣೆಗೆ ಹೈಕೋರ್ಟ್ ತಡೆ