ಬೆಂಗಳೂರು : ಸಂವೇದನಾಶೀಲವಲ್ಲದ ಸರ್ಕಾರಿ ಅಧಿಕಾರಿಗಳ ಔಪಚಾರಿಕ ನಿಯಮಗಳ ಕಟ್ಟುನಿಟ್ಟಿನ ಜಾರಿಯಿಂದ ವಯೋವೃದ್ಧರೊಬ್ಬರು ತಂದೆಯ ವೇತನಕ್ಕಾಗಿ ನ್ಯಾಯಾಂಗ ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನುಂಟು ಮಾಡಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. 1979 ರಿಂದ 1990 ರ ನಡುವೆ ಅರ್ಜಿದಾರರ ತಂದೆ ಗ್ರಾಮ ಅಧಿಕಾರಿ (ಪಟೇಲ್) ಆಗಿ ಸೇವೆ ಸಲ್ಲಿಸಿದ್ದಕ್ಕೆ 37 ಸಾವಿರ ರೂ. ಬಾಕಿ ವೇತನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ.
ಅಲ್ಲದೆ ತಂದೆಯ ವೇತನ ಪಡೆಯಲು 88 ವರ್ಷದ ವೃದ್ಧ ದಶಕಗಳ ಕಾಲ ಹೋರಾಟ ಮಾಡುವಂತಾಗಿರುವುದು ಅಧಿಕಾರಿಶಾಹಿಯ ಅನಗತ್ಯ ನಿಯಮಗಳ ಜಾರಿಗೆ ಉತ್ತಮ ನಿದರ್ಶನವಾಗಿದೆ. ಅಧಿಕಾರಿಗಳ ಈ ವರ್ತನೆಯಿಂದ ಪರಿಹಾರಕ್ಕೆ ಅರ್ಹರಿರುವವರು ಮೃತಪಟ್ಟಿದ್ದು, ವಯಸ್ಸಾದ ಮಗ ಹೋರಾಟ ನಡೆಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಪೀಠ ತಿಳಿಸಿದೆ.
ತಂದೆಯ ಬಾಕಿ ವೇತನ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಸುಮಾರು 88 ವರ್ಷದ ರಾಜಾಜಿನಗರದ ನಿವಾಸಿ ಟಿ ಎಸ್ ರಾಜನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್‌ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜತೆಗೆ, ಅನುಕಂಪದ ಭತ್ಯೆ ಮಂಜೂರು ಮಾಡದ ಕಾರಣ ನೀಡಿ ಅರ್ಜಿದಾರರ ತಂದೆ ಪರಿಹಾರ ಪಡೆಯುವುದಕ್ಕೆ ಅರ್ಹರಲ್ಲ ಎಂದು ತಿಳಿಸಿರುವುದು ಸಮರ್ಥನೀಯವಲ್ಲ. ಈ ವಿಚಾರದಲ್ಲಿ ಸರ್ಕಾರಿ ಅಧಿಕಾರಿಗಳು ತೆಗೆದುಕೊಂಡಿರುವ ನಿಲುವು ಆಶ್ಚರ್ಯಕರವಾಗಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರ ತಂದೆ ನಂಗಲಿ ಗ್ರಾಮದಲ್ಲಿ ಪಟೇಲ್ ಆಗಿ ಸೇವೆ ಸಲ್ಲಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಎದುರಾಗಿಲ್ಲ. ಆದರೆ, ತಾತ್ಕಾಲಿಕೆ ಪರಿಹಾರ ಪಡೆದಿಲ್ಲ ಎಂಬ ಕಾರಣ ನೀಡಿ ಅನುಕಂಪದ ಭತ್ಯೆ ನಿರಾಕರಿಸುವುದಕ್ಕೆ ಸಾಧ್ಯವಿಲ್ಲ. ಸರ್ಕಾರದ ಈ ನಿರ್ಧಾರ ಸಂಪೂರ್ಣ ಅಸಮರ್ಥನೀಯ ಎಂದು ಪೀಠ ತಿಳಿಸಿದೆ.
ಅಲ್ಲದೆ, 1979 ರಿಂದ 1990ರ ವರೆಗೆ ಪಟೇಲ್ ಹುದ್ದೆಯಲ್ಲಿರುವವರಿಗೆ ಸರ್ಕಾರ 100 ರೂ.ಗಳಂತೆ ಪರಿಗಣಿಸಬೇಕು. ಜತೆಗೆ ತಾತ್ಕಾಲಿಕ ಪರಿಹಾರವನ್ನು ಲೆಕ್ಕಹಾಕಿ ಪಾವತಿಸಬೇಕು. ಜತೆಗೆ, 1990 ರಿಂದ 94ರ ವರೆಗಿನ ಭತ್ಯೆ ಮತ್ತು ಬಾಕಿ ಮೊತ್ತವನ್ನು ತಿಂಗಳಿಗೆ 500 ರೂ. ಗಳಂತೆ ಪಾವತಿ ಮಾಡಬೇಕು. ಒಟ್ಟು ಮೊತ್ತಕ್ಕೆ ಶೇ.10ರ ಸರಳ ಬಡ್ಡಿಯೊಂದಿಗೆ ಮುಂದಿನ ಮೂರು ತಿಂಗಳಲ್ಲಿ ಪಾವತಿ ಮಾಡುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ ಏನು ?: ಅರ್ಜಿದಾರರಾದ ಟಿ ಎಸ್ ರಾಜನ್ ಅವರ ತಂದೆ ಶೇಷಾದ್ರಿ ಅಯ್ಯಾಂಗರ್ ಅವರು ಚಿಕ್ಕಮಗಳೂರಿನ ಕಡೂರು ತಾಲೂಕಿನ ತಂಗಲಿ ಎಂಬ ಗ್ರಾಮದಲ್ಲಿ 1979 ರಿಂದ 1990 ರ ಅವಧಿಯಲ್ಲಿ ಪಟೇಲ್ ಆಗಿ ಕೆಲಸ ಮಾಡುತ್ತಿದ್ದರು.
ಕರ್ನಾಟಕ ರಾಜ್ಯ ಪಟೇಲ್ಸ್ ಸಂಘ ಮತ್ತು ರಾಜ್ಯ ಸರ್ಕಾರ ಪ್ರಕರಣದಲ್ಲಿ ರಾಜ್ಯ ಸರ್ಕಾರ ನೀಡಿದ್ದ ಆದೇಶದನ್ವಯ ಶೇಷಾದ್ರಿ ಅಯ್ಯಾಂಗರ್ ಅವರು ರಾಜ್ಯ ಸರ್ಕಾರ ನೀಡುವ ಅನುಕಂಪದ ಭತ್ಯೆಗೆ ಅರ್ಹರಾಗಿದ್ದರು. ಈ ಹಿನ್ನೆಲೆಯಲ್ಲಿ ಅಯ್ಯಾಂಗರ್ ಅವರು ತನ್ನ ಮಾಸಿಕ 100 ರೂ. ಗಳಂತೆ ಬಿಡುಗಡೆಗೆ ಕೋರಿ ಹಲವು ಬಾರಿ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ನಡುವೆ ಅಯ್ಯಾಂಗರ್ ಮೃತಪಟ್ಟಿದ್ದರು.
ಬಳಿಕ ಅವರ ಮಗ ಅರ್ಜಿದಾರ ರಾಜನ್ ಅವರು ಕಡೂರಿನ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ್ದ ಅಧಿಕಾರಿಗಳು ಅಯ್ಯಾಂಗರ್ ಅವರು ತಾತ್ಕಾಲಿಕ ಪರಿಹಾರವನ್ನು ಪಡೆದುಕೊಂಡಿಲ್ಲ. ಹೀಗಾಗಿ ಅನುಕಂಪದ ಭತ್ಯೆ ಪಡೆಯುವುದಕ್ಕೆ ಅರ್ಹರಲ್ಲ ಎಂದು ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ರಾಜನ್ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ :ಹುಣಸೋಡು ಸ್ಫೋಟ ಪ್ರಕರಣ: ಸಿಇಎನ್ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ರದ್ದುಪಡಿಸಿದ ಹೈಕೋರ್ಟ್