ಕರ್ನಾಟಕ

karnataka

ETV Bharat / state

ಶಬ್ನಮ್ ಡೆವಲಪರ್ಸ್ ಉದ್ಯೋಗಿಗಳ ಕೊಲೆ ಪ್ರಕರಣ.. ಪಾತಕಿ ರವಿ ಪೂಜಾರಿ ಜಾಮೀನು ಅರ್ಜಿ ವಜಾ - Ravi Poojary seeks bail in murder case

ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಿಸಿ, 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರವಿ ಪೂಜಾರಿಯನ್ನು ಬಹಳ ಕಷ್ಟಪಟ್ಟು ವಿದೇಶದಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿದೆ. ಆತನ ವಿರುದ್ಧ ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ..

High Court dismisses Ravi Poojary's bail application
ರವಿ ಪೂಜಾರಿ ಜಾಮೀನು ಅರ್ಜಿ ವಜಾ

By

Published : Oct 30, 2020, 10:11 PM IST

ಬೆಂಗಳೂರು : ಶಬ್ನಮ್​ ಡೆವಲಪರ್ಸ್ ಉದ್ಯೋಗಿಗಳ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಭೂಗತ ಪಾತಕಿ ರವಿ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಹದಿಮೂರು ವರ್ಷಗಳ ಹಿಂದೆ ನಡೆದಿದ್ದ ಶಬ್ನಮ್ ಡೆವಲಪರ್ಸ್ ಉದ್ಯೋಗಿಗಳಾದ ರವಿ ಹಾಗೂ ಶೈಲಜಾ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ರವಿ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ತಿರಸ್ಕರಿಸಿದೆ. ವಿಚಾರಣೆ ವೇಳೆ ರವಿ ಪೂಜಾರಿ ಪರ ವಾದ ಮಂಡಿಸಿದ ವಕೀಲರು, ಪ್ರಕರಣದ ಇತರೆ ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ ಖುಲಾಸೆ ಮಾಡಿದೆ.

ಅರ್ಜಿದಾರರ ವಿರುದ್ಧ ಶಬ್ನಮ್ ಡೆವಲಪರ್ಸ್ ಮಾಲಿಕ ಸಮೀವುಲ್ಲಾ ಕೊಲೆಗೆ ಸಂಚು ರೂಪಿಸಿದ ಆರೋಪವಿದೆ. ಆದರೆ, ಸಮೀವುಲ್ಲಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳಿಬ್ಬರ ಕೊಲೆಯಾಗಿದೆ. ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ. ಅರ್ಜಿದಾರರು ಕಳೆದ 8 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಿಸಿ, 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರವಿ ಪೂಜಾರಿಯನ್ನು ಬಹಳ ಕಷ್ಟಪಟ್ಟು ವಿದೇಶದಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿದೆ. ಆತನ ವಿರುದ್ಧ ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಜಾಮೀನು ಮಂಜೂರು ‌ಮಾಡಿದರೆ‌ ಮತ್ತೆ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ.‌ ರವಿ ಪೂಜಾರಿ ಈ ಹಿಂದೆ ಆ್ಯಂಟನಿ ಫರ್ನಾಂಡೀಸ್ ಎಂದು ಹೆಸರು ಬದಲಿಸಿಕೊಂಡು ವಿದೇಶಕ್ಕೆ ತೆರಳಿದ್ದ ಎಂಬಿತ್ಯಾದಿ ವಿವರಗಳನ್ನು ಕೋರ್ಟ್ ಗಮನಕ್ಕೆ ತಂದರು.

‌ವಾದ ಪ್ರತಿ ವಾದ ಆಲಿಸಿದ ದಾಖಲಿಸಿಕೊಂಡಿರುವ ಪೀಠ, ಪ್ರಕರಣದ‌ ಇತರೆ ಒಂಬತ್ತು ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ ಖುಲಾಸೆ ಮಾಡಿರುವುದು ನಿಜವಿರಬಹುದು. ಆದರೆ, ರವಿ ಪೂಜಾರಿ ತಲೆಮೆರಿಸಿಕೊಂಡಿದ್ದ ಹಿನ್ನೆಲೆ ದೋಷಾರೋಪ ಪಟ್ಟಿಯಲ್ಲಿ ಆತನ ವಿರುದ್ಧ ಮಾಡಲಾದ ಆರೋಪಗಳನ್ನು ಪ್ರತ್ಯೇಕಿಸಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯನ್ನು ವಿದೇಶದಲ್ಲಿ ಪತ್ತೆ ಮಾಡಿ ಬಂಧಿಸಲಾಗಿದೆ.

ಇತರೆ ಆರೋಪಿಗಳು ಖುಲಾಸೆಗೊಂಡಿದ್ದಾರೆ ಎಂಬ ಕಾರಣಕ್ಕೆ ಆತನ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರವಿಲ್ಲ ಎನ್ನಲಾಗದು. ಈ ವಿಚಾರದಲ್ಲಿ ವಿಚಾರಣಾ ನ್ಯಾಯಾಲಯವೇ ಸ್ವತಂತ್ರ ನಿರ್ಣಯ ಕೈಗೊಳ್ಳಬೇಕಿದೆ. ಅರ್ಜಿದಾರನ ವಿರುದ್ಧದ ಇನ್ನೂ ಹಲವು ಪ್ರಕರಣಗಳು ಬಾಕಿ ಇದ್ದು, ಜಾಮೀನು ನೀಡಿದರೆ ವಿಚಾರಣೆಗೆ ಹಾಜರಾಗುತ್ತಾನೆ ಎಂಬ ಭವರಸೆ ಇಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಇದೇ ವೇಳೆ ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ABOUT THE AUTHOR

...view details